ಮಂಡ್ಯ/ಉಡುಪಿ/ಬಾಗಲಕೋಟೆ: ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಟ್ರಕ್ ಲಾರಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ (Road Accident) ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೂವರು ಮಹಿಳೆಯರು ಗಂಭೀರ ಗಾಯಗೊಂಡಿದ್ದಾರೆ.
ಭಾನುವಾರ ತಡರಾತ್ರಿ ಗೆಜ್ಜಲಗೆರೆ ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಮಂಡ್ಯದ ಗುತ್ತಲು ನಿವಾಸಿ ಶರೀಫ್ (23) ಮೈಸೂರಿನ ಕೆಸರೆ ನಿವಾಸಿ ಸಿದ್ದಿಕ್ ಪಾಷಾ (25) ಮೃತ ದುರ್ದೈವಿಗಳು. ಸ್ವಿಫ್ಟ್ ಕಾರು ಮುಂದೆ ಸಾಗುವ ವೇಳೆ ಟ್ರಕ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಸ್ಥಳೀಯರ ನೆರವಿನಿಂದ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದ್ದು, ಸಣ್ಣ ಪುಟ್ಟ ಗಾಯಗೊಂಡವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಯಂತ್ರಣ ತಪ್ಪಿ ಡಾಬಾವೊಳಗೆ ನುಗ್ಗಿದ ಟಿಪ್ಪರ್
ಉಡುಪಿಯ ಕುಂದಾಪುರದ ಮಾವಿನಕಟ್ಟೆ ಗುಲ್ವಾಡಿ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಟಿಪ್ಪರ್ ಡಾಬಾದ ಒಳಗೆ ನುಗ್ಗಿದೆ. ಕೊಜೆ ಮಣ್ಣು ಹೇರಿಕೊಂಡು ಹೋಗುತ್ತಿದ್ದ ಟಿಪ್ಪರ್ ವಾಹನವು ಅತಿ ವೇಗವಾಗಿ ಬಂದಿದ್ದ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಅಭಿಜಿನ್ ಎಂಬುವವರಿಗೆ ಗಾಯವಾಗಿದ್ದು, ಕುಂದಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾರ್ಟ್ ಸರ್ಕ್ಯುಟ್‌ನಿಂದ ಸುಟ್ಟು ಕರಕಲಾದ ವಾಹನ
ಶಾರ್ಟ್ ಸರ್ಕ್ಯುಟ್‌ನಿಂದ ಬೆಂಕಿ ಹೊತ್ತಿ ದನದ ಶೆಡ್ ಬೆಂಕಿಗೆ ಆಹುತಿಯಾದ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಮರಟಗೆರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಡೆಪ್ಪಗೌಡ ಇಟ್ಲಾಪುರ್ ಎಂಬುವರಿಗೆ ಸೇರಿದ ದನದ ಶೆಡ್ ಬೆಂಕಿ ಆಹುತಿಯಾಗಿದ್ದು ಎರಡು ಎಮ್ಮೆಗಳಿಗೆ ಬೆಂಕಿ ತಗುಲಿ ಸುಟ್ಟು ಗಾಯವಾಗಿದೆ. ಇನ್ನು ಶೆಡ್ ಬಳಿ ನಿಲ್ಲಿಸಿದ್ದ ಟಾಟಾ ಏಸ್ ಕೂಡ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ:Upendra Kushwaha: ನಿತೀಶ್ ಕುಮಾರ್ ಜತೆ ಮುನಿಸು, ಜೆಡಿಯುಗೆ ಉಪೇಂದ್ರ ಕುಶ್ವಾಹ ವಿದಾಯ, ಹೊಸ ಪಕ್ಷ ಘೋಷಣೆ
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಗಿದೆ. ಶೆಡ್‌ನಲ್ಲಿರುವ ಎಲ್ಲಾ ವಸ್ತುಗಳಿಗೆ ಬೆಂಕಿ ಹೊತ್ತಿ ಜಾನುವಾರು, ವಾಹನ ಶೆಡ್ ಸೇರಿ ಲಕ್ಷಾಂತರ ರೂ ಹಾನಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ