ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 48ರ ಕೆಂಗಲ್ ಕೆಂಪೊಹಳ್ಳಿ ಬಳಿ ನಡೆದ ಸರಣಿ ಅಪಘಾತಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಟಾಟಾ ಏಸ್ ವಾಹನಕ್ಕೆ ಹಿಂಬದಿಯಿಂದ ವಾಹನವೊಂದು ಡಿಕ್ಕಿ (Road Accident) ಹೊಡೆದಿದ್ದು, ಈ ರಭವಸಕ್ಕೆ ಟಾಟಾ ಏಸ್ ಚಾಲಕ ಹೊರಗೆ ಬಿದ್ದಿದ್ದಾರೆ. ಆಗ ಹಿಂಬದಿಯಿಂದ ಬರುತ್ತಿದ್ದ ಗೂಡ್ಸ್ ಲಾರಿ ಹರಿದು ಅವರು ಮೃತಪಟ್ಟಿದ್ದಾರೆ. ಪ್ರವೀಣ್ ನಾಯಕ್ (26) ಮೃತ ದುರ್ದೈವಿ.
ತುಮಕೂರಿನ ಉಪ್ಪಾರಹಳ್ಳಿ ನಿವಾಸಿ ಆಗಿರುವ ಪ್ರವೀಣ್ ನಾಯಕ್ ಖಾಸಗಿ ಕಂಪನಿಯ ಟಾಟಾ ಏಸ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ತುಮಕೂರಿನಿಂದ ಬೆಂಗಳೂರು ಕಡೆಗೆ ಟಾಟಾ ಏಸ್ ವಾಹನದಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ವಾಹನ ಸಮೇತ ಚಾಲಕ ಪ್ರವೀಣ್ ಡಿವೈಡರ್ಗೆ ಡಿಕ್ಕಿ ಹೊಡೆದು ಹಾರಿದ್ದಲ್ಲದೆ, ಪಕ್ಕದ ರಸ್ತೆಗೆ ಬಿದ್ದಿದ್ದಾರೆ. ಆಗ ಹಿಂದೆಯಿಂದ ಬರುತ್ತಿದ್ದ ಗೂಡ್ಸ್ ಲಾರಿ ತಲೆ ಮೇಲೆ ಹರಿದಿದೆ. ಅಪಘಾತವಾಗುತ್ತಿದ್ದಂತೆ ವಾಹನ ಬಿಟ್ಟು ಗೂಡ್ಸ್ ವಾಹನ ಚಾಲಕ ಪರಾರಿ ಆಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ಈ ಸಂಬಂಧ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಸಂಚಾರಿ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿ ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹಸಪಟ್ಟರು.
ನಿಯಂತ್ರಣ ತಪ್ಪಿದ ಕಾರು, ಟ್ರ್ಯಾಕ್ಟರ್ ಡಿಕ್ಕಿಯಾಗಿ ಚಾಲಕ ಸಾವು
ನಿಯಂತ್ರಣ ತಪ್ಪಿದ ಕಾರುವೊಂದು ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಮಹೇಶ್ (47) ಎಂಬುವವರು ಕುದೂರು ಸಮೀಪದ ವೀರಾಪುರದಲ್ಲಿರುವ ಜಮೀನನ್ನು ನೋಡಿಕೊಂಡು ಕಾರಿನಲ್ಲಿ ವಾಪಸ್ ಆಗುತ್ತಿದ್ದರು.
ಇದನ್ನೂ ಓದಿ: Viral News: ಹೆರಿಗೆಯಾದ 3 ಗಂಟೆಯಲ್ಲೇ ಪರೀಕ್ಷಾ ಕೇಂದ್ರಕ್ಕೆ ಬಂದು ಎಸ್ಸೆಸ್ಸೆಲ್ಸಿ ಸೈನ್ಸ್ ಪೇಪರ್ ಬರೆದ 22 ವರ್ಷದ ವಿದ್ಯಾರ್ಥಿನಿ!
ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ರಸ್ತೆ ಮೂಲಕ ತೆರಳುತ್ತಿದ್ದಾಗ, ನೆಲಮಂಗಲ ಸಮೀಪ ಯಂಟಗಾನಹಳ್ಳಿ ಮಾರ್ಗ ಮಧ್ಯೆ ಕಾರು ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹೇಶ್ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರ ಸಾವು
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಇಟಗಿ ಸಮೀಪ ತಡರಾತ್ರಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಅಂದಪ್ಪ ಕೊನಣ್ಣವರ (೪೦) ಮೃತ ದುರ್ದೈವಿ. ಮತ್ತೊಬ್ಬ ಸವಾರನಿಗೆ ಗಂಭೀರ ಗಾಯಗೊಂಡಿದ್ದು, ಗಜೇಂದ್ರಗಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರದ ಲೇಟೆಸ್ಟ್ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ