ಮಂಗಳೂರು: ರಸ್ತೆಯಲ್ಲಿ ಸಾಗುತ್ತಿದ್ದಾಗ ಒಮ್ಮಿಂದೊಮ್ಮೆಗೇ ಅಡ್ಡ ಬಂದ ನಾಯಿಯನ್ನು ರಕ್ಷಿಸಲು ಹೋದ (Road accident) ಸ್ಕೂಟರ್ ಸವಾರ ತಾನೇ ಪ್ರಾಣ ಕಳೆದುಕೊಂಡಿದ್ದಾರೆ. ನಾಯಿಯನ್ನು ತಪ್ಪಿಸುವ ವೇಳೆ ಸ್ಕೂಟರ್ ಉರುಳಿಬಿದ್ದು ಸವಾರನ ತಲೆ ಡಿವೈಡರ್‌ಗೆ ಬಡಿದು ದುರಂತ ಸಂಭವಿಸಿದೆ. ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಘಟನೆ ನಡೆದಿರುವುದು ಮಂಗಳೂರು ನಗರದ (Mangalore news) ಯೆಯ್ಯಾಡಿ ಸಮೀಪದ ಶರ್ಬತ್ ಕಟ್ಟೆ ಎಂಬಲ್ಲಿ. ಮರೋಳಿ ಬಜ್ಜೋಡಿ ನಿವಾಸಿ ನರಸಿಂಹ ಗಟ್ಟಿ (67) ಮೃತರು.
ನರಸಿಂಹ ಗಟ್ಟಿ ಅವರು ಬೆಳಗ್ಗೆ ಮನೆಯಿಂದ ಯೆಯ್ಯಾಡಿ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದ ಸಂದರ್ಭ ನಾಯಿಯೊಂದು ಅಡ್ಡದಾಟಿದೆ. ನಿಯಂತ್ರಣ ತಪ್ಪಿ ಅವರು ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬ್ಯಾಲೆನ್ಸ್ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾರೆ. ಡಿವೈಡರ್ ತಲೆಗೆ ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ತಕ್ಷಣ ಎ.ಜೆ ಆಸ್ಪತ್ರೆಗೆ ದಾಖಲಿಸುವ ವೇಳೆ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಸಂಸ್ಥೆಯೊಂದರ ಡೀಲರ್‌ಷಿಪ್ ಪಡೆದುಕೊಂಡು ವ್ಯವಹಾರ ನಿರ್ವಹಿಸುತ್ತಿದ್ದ ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಇದನ್ನೂ ಓದಿ: Road Accident: 3 ವರ್ಷದ ಕಂದಮ್ಮನ ತಲೆ ಮೇಲೆ ಹರಿದ ಟಿಪ್ಪರ್; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ತಲಪಾಡಿ: ಲಾರಿಗಳ ನಡುವೆ ಸಿಲುಕಿ ಚಾಲಕ ಮೃತ್ಯು
ಉಳ್ಳಾಲ: ಎರಡು ಕಂಟೇನರ್ ಲಾರಿಗಳ ನಡುವೆ ಸಿಲುಕಿ ಲಾರಿ ಚಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾ,.ಹೆ.66ರ ತಲಪಾಡಿ ಟೋಲ್ ಗೇಟ್ ಸಮೀಪ ಗುರುವಾ ತಡರಾತ್ರಿ ವೇಳೆ ಸಂಭವಿಸಿದೆ.
ಹರ್ಯಾಣ ಮೂಲದ ಶಮೀಮ್ (38) ಮೃತಪಟ್ಟ ಚಾಲಕ. ಹರಿಯಾಣದಿಂದ ಕೇರಳ ಕಡೆಗೆ ಒಂದೇ ಸಂಸ್ಥೆಗೆ ಸೇರಿದ, ಸಂಬಂಧಿ ಚಾಲಕರು ಎರಡು ಕಂಟೈನರ್ ಲಾರಿಗಳಲ್ಲಿ ಕೇರಳ ಕಡೆಗೆ ಸರಕು ಸಾಗಾಟ ನಡೆಸುತ್ತಿದ್ದರು.
ತಲಪಾಡಿ ಟೋಲ್ ಸಮೀಪ ಒಂದು ಕಂಟೇನರ್ ಲಾರಿಯನ್ನು ಚಾಲಕ ಶಮೀಮ್ ಚಹಾ ಕುಡಿಯಲೆಂದು ನಿಲ್ಲಿಸಿದ್ದರು. ಇದೇ ಸಂದರ್ಭ ಅದೇ ಸಂಸ್ಥೆಗೆ ಸೇರಿದ ಇನ್ನೊಂದು ಲಾರಿ ಶಮೀಮ್ ಅವರ ಸಂಬಂಧಿಯೇ ಆಗಿರುವ ಚಾಲಕ ಮೊದಲಿಗೆ ನಿಲ್ಲಿಸಲಾಗಿದ್ದ ಲಾರಿಯ ಮುಂದೆ ಹೋಗಿ ಲಾರಿಯನ್ನು ನಿಲ್ಲಿಸಿದ್ದರು.
ಶಮೀಮ್ ತಾನು ನಿಲ್ಲಿಸಿದ್ದ ಲಾರಿ ಮುಂದೆ ನಿಂತಿದ್ದ ಸಂದರ್ಭ, ಎದುರಿನಲ್ಲಿ ನಿಲ್ಲಿಸಿದ್ದ ಲಾರಿ ಏಕಾಏಕಿ ಹಿಂದೆ ಚಲಿಸಿ ಶಮೀಮ್ ಎರಡು ಲಾರಿಗಳ ನಡುವೆ ಸಿಲುಕಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಮೀಮ್ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಒಳಭಾಗದಲ್ಲಿ ಅಂಗಾಂಗಳಿಗೆ ಗಂಭೀರ ರೀತಿಯಲ್ಲಿ ಗಾಯಗಳಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ಶಮೀಮ್ ಹಾಗೂ ಅಪಘಾತಕ್ಕೀಡಾದ ಲಾರಿ ಚಾಲಕ ಸಹೋದರ ಸಂಬಂಧಿಗಳಾಗಿದ್ದಾರೆ. ಎರಡು ಕಂಟೈನರ್ ಲಾರಿಗಳು ಸಿಬಿಐನ ಹಿರಿಯ ಅಧಿಕಾರಿಯ ಸಹೋದರನಿಗೆ ಸೇರಿದ್ದಾಗಿ ತಿಳಿದುಬಂದಿದೆ.