ಚಿಕ್ಕಬಳ್ಳಾಪುರ/ಆನೇಕಲ್/ವಿಜಯಪುರ: ಚಿಕ್ಕಬಳ್ಳಾಪುರ, ಆನೇಕಲ್ ಮತ್ತು ವಿಜಯಪುರದಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ (Road accident) ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮೂವರು ಕೂಡಾ ಬೈಕ್ ಸವಾರರೇ (Three Bike riders death) ಆಗಿರುವುದು ದುರಂತಗಳ ಸಾಮಾನ್ಯ ಸಂಗತಿ
ಬೈಕ್ ಗೆ ಅಡ್ಡ ನುಗ್ಗಿದ ನಾಯಿ ಸವಾರ ಸ್ಥಳದಲ್ಲೇ ಸಾವು
ಚಿಕ್ಕಬಳ್ಳಾಪುರ: ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುವ ನಾಯಿಗಳು ಮನುಷ್ಯರ ಪ್ರಾಣಗಳನ್ನು ಕಸಿಯುವುದು ನಿತ್ಯ ನಡೆಯುತ್ತಲೇ ಇರುತ್ತವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ – ಶಿಡ್ಲಘಟ್ಟ ರಾಜ್ಯ ಹೆದ್ದಾರಿ 324ರಲ್ಲಿ ಬೂದಾಳ ಗೇಟ್‌ನಲ್ಲಿ ಅಡ್ಡಬಂದ ನಾಯಿಯೊಂದನ್ನು ತಪ್ಪಿಸಲು ಹೋಗಿ ಬೈಕ್ ಸವಾರರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿಯನ್ನು ಮಣಿಪ್ರಸಾದ್ (29) ಎಂದು ಗುರುತಿಸಲಾಗಿದೆ. ಅವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ನಾಯಿಯೊಂದು ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಹೋದಾಗ ಅವರು ಉರುಳಿ ಬಿದ್ದು ಮೃತಪಟ್ಟಿದ್ದಾರೆ.
ಆನೇಕಲ್: ಬೈಕ್‌ಗೆ ಟಾಟಾ ಏಸ್ ಡಿಕ್ಕಿಯಾಗಿ ಯುವಕ ಸಾವು
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿರುವ ಡಿ ಮಾರ್ಟ್ ಬಳಿ ಟಾಟಾ ಏಸ್ ಒಂದು ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿದ್ದಾರೆ. ಉತ್ತರ ಕರ್ನಾಟಕ ಮೂಲದ ಚಂದ್ರಶೇಖರ್ ಮೃತ ದುರ್ದೈವಿ.
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಲ್ಲಿ ದಾಖಲಾಗಿರುವಂತೆ, ಅಲ್ಲೊಂದು ಟಾಟಾ ಏಸ್ ವಾಹನ ನಿಂತಿತ್ತು. ಹಿಂದಿನಿಂದ ಒಬ್ಬ ಬೈಕ್ ಸವಾರ ಸಾಗಿ ಬರುತ್ತಿದ್ದ. ಈ ಹಂತದಲ್ಲಿ ಟಾಟಾ ಏಸ್ ಚಾಲಕ ಒಮ್ಮೆಗೇ ವಾಹನವನ್ನು ಸ್ಟಾರ್ಟ್ ಮಾಡಿ ಬಲಕ್ಕೆ ತಿರುಗಿಸಿದ್ದ. ಇದನ್ನು ಅರಿಯದ ಬೈಕ್ ಸವಾರ ಟಾಟಾ ಏಸ್‌ಗೆ ಡಿಕ್ಕಿ ಹೊಡೆದು ಕೆಳಗೆ ಉರುಳಿಬಿದ್ದಿದ್ದಾನೆ. ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Road Accident : ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು; ಆಘಾತದಿಂದ ಇಬ್ಬರು ಸಾವು, ಸಹಾಯಕ್ಕೆ ಬಂದವನೂ ಹೆಣವಾದ
ವಿಜಯಪುರ: ಲಾರಿ- ಬೈಕ್ ಡಿಕ್ಕಿಯಾಗಿ ಸವಾರ ಸಾವು
ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಅಜನಾಳ ಗ್ರಾಮದ ಬಳಿ ಲಾರಿ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್‌ನ ಹಿಂಬದಿಯಲ್ಲಿದ್ದ ಇಬ್ಬರು ಮಹಿಳೆಯರಿಗೆ ಗಾಯವಾಗಿದೆ.
ಬೈಕ್ ಸವಾರ ಭೀಮಾಶಂಕರ ತಳವಾರ (40) ಸ್ಥಳದಲ್ಲೇ ಮೃತಪಟ್ಟರೆ ಅವರ ಜತೆ ಬೈಕ್‌ನಲ್ಲಿ ಸಾಗುತ್ತಿದ್ದ ಮೃತನ ಪತ್ನಿ ಬೋರಮ್ಮ ಹಾಗೂ ಆತನ ಸಹೋದರಿ ನೀಲಮ್ಮಗೆ ಗಂಭೀರ ಗಾಯಗಳಾಗಿವೆ. ಗಾಯಾಳು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ವ್ಯಕ್ತಿ ಹಾಗೂ ಗಾಯಾಳುಗಳು ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ವಾಸಿಗಳಾಗಿದ್ದಾರೆ.
ಘಟನೆ ನಡೆಯುತ್ತಿದ್ದಂತೆಯೇ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.