ಬೆಂಗಳೂರು: ಇಲ್ಲಿನ ನಾಯಂಡಹಳ್ಳಿ ಜಂಕ್ಷನ್ (Nayandahalli Junction) ಸಮೀಪ ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ (Road Accident) ಘಟನೆ ನಡೆದಿದೆ. ಯುವಕರಿಬ್ಬರು ಎಕ್ಸ್ಎಲ್ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ, ನಿಯಂತ್ರಣ ಸಿಗದೆ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ರಾಯಚೂರು ಮೂಲದ ರಫೀಕ್ (20) ಮೃತದುರ್ದೈವಿ ಆಗಿದ್ದಾನೆ. ಯಶವಂತಪುರದಲ್ಲಿ ವಾಸವಾಗಿದ್ದ ರಫೀಕ್ ವೃತ್ತಿಯಲ್ಲಿ ಪೇಂಟರ್ ಆಗಿದ್ದ. ಮಂಗಳವಾರ ಬೆಳಗ್ಗೆ ಮನೆಯೊಂದಕ್ಕೆ ಪೇಂಟಿಂಗ್ ಮಾಡಲು ತೆರಳಿದ್ದ. ಯಶವಂತಪುರ ಕಡೆಯಿಂದ ಬೈಕ್‌ನಲ್ಲಿ ಆಗಮಿಸುತ್ತಿದ್ದಾಗ ಹಿಂಬದಿಯಿಂದ ಟಿಪ್ಪರ್ ಲಾರಿ ಹರಿದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಕೆಳಗೆ ಸಿಲುಕಿದ ರಫೀಕ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಇತ್ತ ಅಪಘಾತ ನಡೆದ ಬೆನ್ನಲ್ಲೇ ಲಾರಿ ಬಿಟ್ಟು ಚಾಲಕನೊಬ್ಬ ಪರಾರಿ ಆಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ನಾಯಂಡಹಳ್ಳಿ ಜಂಕ್ಷನ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪರಾರಿ ಆಗಿರುವ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಅಂಕೋಲಾ ಕೊಡ್ಲಗದ್ದೆ ಬಳಿ ಉರುಳಿದ ಹಣ್ಣಿನ ಲಾರಿ, ಚಾಲಕ ಸಾವು
ಅಂಕೋಲಾ (ಉತ್ತರ ಕನ್ನಡ): ಹಣ್ಣುಗಳನ್ನು ತುಂಬಿಕೊಂಡು ಸಾಗುತ್ತಿದ್ದ ಈಚರ್ ವಾಹನವೊಂದು ರಾಷ್ಟೀಯ ಹೆದ್ದಾರಿ 63ರ ಕೊಡ್ಲಗದ್ದೆ ಬಳಿ ದಾರಿ ಮಧ್ಯೆ ಉರುಳಿ ಮರಕ್ಕೆ ಗುದ್ದಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಿಂದ ಕೇರಳದ ಕೊಚ್ಚಿಗೆ ಹಣ್ಣುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿನ ಮರಕ್ಕೆ ಬಡಿದಿದೆ. ಪರಿಣಾಮವಾಗಿ ಲಾರಿ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ವಾಹನದಲ್ಲಿದ್ದ ಹಣ್ಣಿನ ಪೆಟ್ಟಿಗೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಅಪಘಾತಗೊಂಡ ಲಾರಿ ಮತ್ತು ಮರದ ಮಧ್ಯೆ ಚಾಲಕ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದು ಚಾಲಕನ ಮೃತದೇಹವನ್ನು ಹೊರತೆಗೆಯಲು ಕ್ರೇನ್ ಅನ್ನು ಬಳಸಲಾಯಿತು.
ಅಂಕೋಲಾ ಸಿಪಿಐ ಜಾಕ್ಸನ್ ಡಿಸೋಜ, ಪಿಎಸ್‌ಐ ಪ್ರೇಮನಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಮತ್ತು ಲಾರಿ ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರಿಗೆ ಗಾಯ
ಅಂಕೋಲಾ (ಉತ್ತರ ಕನ್ನಡ ಜಿಲ್ಲೆ): ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಗಾಯಗಳಾದ ಘಟನೆ ತಾಲೂಕಿನ ಶಿರೂರು ರಾ.ಹೆ 66ರಲ್ಲಿ ನಡೆದಿದೆ.
ಕಾರವಾರ ತಾಲೂಕಿನ ಅಮದಳ್ಳಿ ಕಂತ್ರಿವಾಡಾ ನಿವಾಸಿಗಳಾದ ದಿನೇಶ ಅಶೋಕ ಕಂತ್ರಿಕರ (34), ನವೀನ ಅನಿಲ ಕಂತ್ರಿಕರ, (23), ರೋಹಿತ ಸುಭಾಷ ಕಂತ್ರಿಕರ (23), ರಾಜರಾಮ ಅಶೋಕ ಠಾಕರಕರ (23) ಎಂಬುವವರು ಗಾಯಗೊಂಡವರಾಗಿದ್ದಾರೆ.
ಲಾರಿ ಚಾಲಕನಾದ ಬಾಬುಷಾ ಗುಂಡಪ್ಪ ಎಂಬಾತನು ಕುಮಟಾ ಕಡೆಯಿಂದ ಅಂಕೋಲಾ ಕಡೆ ತನ್ನ ಲಾರಿಯನ್ನು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈತ ಎದುರಿನಿಂದ ಬರುತ್ತಿದ್ದ ಕಾರನ್ನು ನೋಡಿಯೂ ತನ್ನ ಮುಂದೆ ಹೊಗುತ್ತಿದ್ದ ರಿಕ್ಷಾವನ್ನು ಓವರಟೇಕ್ ಮಾಡುವ ಭರದಲ್ಲಿ ಅಂಕೋಲಾ ಕಡೆಯಿಂದ ಕುಮಟಾ ಕಡೆ ಹೊಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Death News : ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ, ಡಿ.ಬಿ. ಇನಾಮ್ದಾರ್ ಇನ್ನಿಲ್ಲ
ಗಾಯಾಳುಗಳನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.