Site icon Vistara News

Road Accident : ಭೀಕರ ರಸ್ತೆ ಅಪಘಾತ: ಮಕ್ಕಳು ಸೇರಿ ಒಂದೇ ಕುಟುಂಬದ ಐವರ ದುರ್ಮರಣ

Road Accident in Kalaburagi 5 people dead

ಕಲಬುರಗಿ: ಒಂದು ಸಣ್ಣ ನಿರ್ಲಕ್ಷ್ಯವು ಐವರ ಜೀವವನ್ನೇ ತೆಗೆದಿದೆ. ಒಂದೇ ಬೈಕ್‌ನಲ್ಲಿ ಬರುತ್ತಿದ್ದ ಒಂದೇ ಕುಟುಂಬದ ಐವರು ರಸ್ತೆ ಅಪಘಾತದಲ್ಲಿ (Road Accident) ಮೃತಪಟ್ಟಿದ್ದಾರೆ. ಬೈಕ್‌ಗೆ ಲಾರಿ ಡಿಕ್ಕಿಯಾಗಿ ಐವರು ಮೃತಪಟ್ಟಿರುವ ಘಟನೆ ಕಲಬುರಗಿಯ ಅಫಜಲಪುರ ತಾಲೂಕಿನ ಹಳ್ಳೋಳ್ಳಿ ಕ್ರಾಸ್ ಬಳಿ ನಡೆದಿದೆ. ನೇಪಾಳ ಮೂಲದ ಒಂದೇ ಕುಟುಂಬದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಂದೇ ಬೈಕ್ ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ತೆರಳುತ್ತಿದ್ದರು. ದುದನಿಯಿಂದ ಅಫಪೂರ ಕಡೆಗೆ ಬರುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಒಂದೊಂದು ದಿಕ್ಕಿಗೆ ಎಗರಿ ಬಿದ್ದಿದ್ದಾರೆ. ಐವರಿಗೂ ತೀವ್ರ ರಕ್ತಸ್ರಾವದಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟವರೆಲ್ಲರೂ ಅಫಜಲಪೂರದಲ್ಲಿ ಫಾಸ್ಟ್ ಫುಡ್ ಮಾರಾಟ ಹೋಟೆಲ್ ನಡೆಸುತ್ತಿದ್ದರು. ನೇಪಾಳ ಮೂಲದ ಈ ಕುಟುಂಬ ಕಳೆದ ಹಲವು ವರ್ಷಗಳಿಂದ ಅಫಜಲಪೂರದಲ್ಲಿ ವಾಸವಿತ್ತು ಎನ್ನಲಾಗಿದೆ. ಐವರ ಗುರುತು ಪತ್ತೆಯಾಗಬೇಕಿದೆ. ಘಟನಾ ಸ್ಥಳಕ್ಕೆ ಅಫಜಲಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಬೈಕ್‌ಗೆ ಬಸ್‌ ಡಿಕ್ಕಿಯಾಗಿ ತಂದೆ-ಮಗ ಸಾವು

ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಇಬ್ಬರ ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಪುರ ಬಳಿ ಜಮೀನಿಗೆ ಮಕ್ಕಳನ್ನು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದಾಗ ಬಸ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ತಂದೆ ಹಾಗೂ ಮಗ ಮೃತಪಟ್ಟಿದ್ದಾರೆ. ಶಿವಪುರ ಗ್ರಾಮದ ಸಾಬಣ್ಣ (42) ಹಾಗೂ ಮನೋಜ್ (8) ಮೃತ ದುರ್ದೈವಿಗಳು,

ಮತ್ತೊಬ್ಬ ಮಗ ಗಂಭೀರ ಗಾಯಗೊಂಡಿದ್ದು ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಸಂಗಮನಿಂದ ಯಾದಗಿರಿಗೆ ತೆರಳುತ್ತಿತ್ತು. ಅಪಘಾತ ನಡೆಯುತ್ತಿದ್ದಂತೆ ಬಸ್‌ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ಪರಾರಿ ಆಗಿದ್ದಾರೆ. ಇತ್ತ ಆಕ್ರೋಶಗೊಂಡ ಗ್ರಾಮಸ್ಥರು ಬಸ್‌ನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರುಳಿನ ಕುಡಿ ಉಳಿಸಿಕೊಳ್ಳಲು ಬಂದಿದ್ದ ಗರ್ಭಿಣಿಗೆ ಬಡಿದ ಯಮಸ್ವರೂಪಿ ಲಾರಿ!

ಆನೇಕಲ್‌: ಆಕೆ ಗರ್ಭಿಣಿ (Pregnant woman). ಹೊಟ್ಟೆಯೊಳಗಿದ್ದ ಮಗುವಿನ ಹೃದಯದಲ್ಲಿ ರಂಧ್ರ ಇದೆ ಎಂದು ಗೊತ್ತಾಗಿತ್ತು. ಹೇಗಾದರೂ ಮಾಡಿ ತನ್ನ ಕರುಳಿನ ಕುಡಿಯನ್ನು ಉಳಿಸಿಕೊಳ್ಳಬೇಕೆಂದು ದೂರದ ಆಂಧ್ರದಿಂದ ಬೆಂಗಳೂರಿಗೆ ತನ್ನ ಅಕ್ಕನೊಂದಿಗೆ ಬಂದಿದ್ದಳು. ಆದರೆ ಯಮನಂತೆ ಬಂದ ಲಾರಿಯು ಡಿಕ್ಕಿ ಹೊಡೆದ ರಭಸಕ್ಕೆ ಒಡಲಿನ ಕುಡಿಯು ಸೇರಿ ಮೂವರು (Road accident) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

7 ತಿಂಗಳ ಗರ್ಭಿಣಿ ರುಕಿಯಾ (28) ಹಾಗೂ ಲಕ್ಷ್ಮಮ್ಮ (50) ಮೃತ ದುರ್ದೈವಿಗಳು. ಆಂಧ್ರ ಮೂಲದ ಮದನಪಲ್ಲಿ ನಿವಾಸಿಯಾಗಿರುವ ರುಕಿಯಾ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವಿಗೆ ಹೃದಯದಲ್ಲಿ ರಂಧ್ರ ಇರುವುದು ಗೊತ್ತಾಗಿತ್ತು. ಇದೇ ಕಾರಣಕ್ಕೆ ಪರಿಚಯಸ್ಥರ ಮೂಲಕ ಬೆಂಗಳೂರಿಗೆ ಬಂದಿದ್ದರು. ವರ್ತೂರು ಸಮೀಪದ ಮದುರಾನಗರದ ಲಕ್ಷ್ಮಮ್ಮ(50) ಜತೆಗೆ ಬೊಮ್ಮಸಂದ್ರಕ್ಕೆ ಬಂದಿದ್ದರು.

ಏಳು ತಿಂಗಳ ತುಂಬು ಗರ್ಭಿಣಿಯಾಗಿದ್ದರಿಂದ ಸ್ಕೈವಾಕ್ ಹತ್ತಲಾಗದೆ ಬಸ್ ಇಳಿದವರೇ ಹೆದ್ದಾರಿ ದಾಟಿ ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ಹೋಗಲು ಮುಂದಾಗಿದ್ದರು. ಈ ವೇಳೆ ಟಾಟಾಏಸ್ ತಪ್ಪಿಸಿದ ಕಂಟೇನರ್ ಲಾರಿ ಮಹಿಳೆಯರಿಬ್ಬರಿಗೆ‌ ಡಿಕ್ಕಿ ಹೊಡೆದಿತ್ತು. ಪರಿಣಾಮ ಎರಡು ದೇಹಗಳು ಛಿದ್ರ ಛಿದ್ರಕೊಂಡಿತ್ತು. ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯ ಆಸ್ಪತ್ರೆ ಮುಂಭಾಗವೇ ಈ ಅಪಘಾತ ನಡೆದಿದೆ.

ಎನ್‌ಎಚ್‌ಎ ವತಿಯಿಂದ ಅವೈಜ್ಞಾನಿಕ ಸ್ಕೈವಾಕ್ ನಿರ್ಮಾಣ ಮಾಡಿರುವುದೆ ಅಪಘಾತಗಳಿಗೆ ಕಾರಣ ಎನ್ನಲಾಗಿದೆ. ಬೊಮ್ಮಸಂದ್ರ ಕೈಗಾರಿಕೆಗಳಿಗೆ ಬರುವ ಕಾರ್ಮಿಕರು ಸ್ಕೈವಾಕ್‌ ಬಿಟ್ಟು ರಸ್ತೆ ದಾಟುತ್ತಾರೆ. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ನಾರಾಯಣ ಹೃದಯಾಲಯ ಮತ್ತು ಬಿಟಿಎಲ್ ಕಾಲೇಜಿದೆ. ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಸ್ತೆ ದಾಟುತ್ತಾರೆ. ಹೀಗೆ ಸ್ಕೈ ವಾಕ್ ಇದ್ದರೂ ಕೂಡ ರಸ್ತೆ ಮೂಲಕವೇ ದಾಟಲು ಹೋಗಿ ಮಹಿಳೆಯರಿಬ್ಬರು ಹಾಗೂ ಪ್ರಪಂಚವನ್ನೇ ನೋಡದ ಮಗು ತಾಯಿ ಗರ್ಭದಲ್ಲೇ ಮೃತಪಟ್ಟಿದೆ. ಸದ್ಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version