ಬೆಂಗಳೂರು: ತಡೆಯಲು ಬಂದ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್‌ಗೆ ಬೈಕ್ ಸವಾರನೊಬ್ಬ ಗುದ್ದಿ (Road Accident) ಪರಾರಿ ಆಗಿದ್ದಾನೆ. ಹೆಲ್ಮೆಟ್ ಧರಿಸದೆ ಗಾಡಿ ಚಲಾಯಿಸುತ್ತಿದ್ದವನನ್ನು ಕಂಡ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ಹೆಡ್ ಕಾನ್ಸ್‌ಟೇಬಲ್ ಪರಸಪ್ಪ ಸವಾರನನ್ನು ತಡೆಯಲು ಮುಂದಾಗಿದ್ದರು.
ಆದರೆ, ವಾಹನ ನಿಲ್ಲಿಸದೇ ಪರಸಪ್ಪನಿಗೆ ಸವಾರ ಗುದ್ದಿದ್ದಾನೆ. ಆ ರಭಸಕ್ಕೆ ಪರಸಪ್ಪ ಪಲ್ಟಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಕಳೆದೆರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಪರಸಪ್ಪ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಅವರನ್ನು, ಅಲ್ಲಿದ್ದ ಸಾರ್ವಜನಿಕರು ಸೇರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ಸಂಬಂಧ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ.
ಕುಡಿತ ತಂದ ಆಪತ್ತು
ಸುಮನಹಳ್ಳಿಯಿಂದ ನಾಯಂಡಹಳ್ಳಿಗೆ ತೆರಳುವ ನಾಗರಬಾವಿ ಔಟರ್ ರಿಂಗ್ ರೋಡ್‌ನಲ್ಲಿ ತಡರಾತ್ರಿ ಚಾಲಕನೊಬ್ಬ ಕುಡಿದ ಅಮಲಿನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಡಿವೈರ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಆಗಿದೆ. ಕಾರು ಚಾಲಕ ಚಿಕ್ಕಣ್ಣ ಸೇರಿ ಮತ್ತೊಬ್ಬ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.