Site icon Vistara News

Road Accident : ಧ್ವಜಾರೋಹಣಕ್ಕೆ ತೆರಳುತ್ತಿದ್ದ ಶಿಕ್ಷಕ ರಸ್ತೆ ಅಪಘಾತದಲ್ಲಿ ಸಾವು

Teacher dead as Bolero hits bike

ಕಾರವಾರ : ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಳಕಾರ್ ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ (Road Accident) ಶಿಕ್ಷಕರೊಬ್ಬರು (Govt School Teacher) ಮೃತಪಟ್ಟಿದ್ದಾರೆ. ಹೆಗಡೆ ಗ್ರಾಮದ ನಿವಾಸಿ ಗೋಪಾಲ ಪಟಗಾರ (50) ಮೃತ ದುರ್ದೈವಿ.

ಸ್ವಾತಂತ್ರ್ಯ ದಿನಾಚರಣೆ (Independence Day 2023) ಪ್ರಯುಕ್ತ ಶಾಲೆಯಲ್ಲಿ ಧ್ವಜಾರೋಹಣಕ್ಕೆ ತೆರಳುತ್ತಿದ್ದಾಗ ಶಿಕ್ಷಕನಿಗೆ ಬುಲೆರೋ ವಾಹನ ಡಿಕ್ಕಿ ಹೊಡೆದಿದೆ. ಗೋಪಾಲ ಗುಡೇಅಂಗಡಿ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದರು. ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ಎದುರಿಗೆ ಬಂದ ಬುಲೆರೋ ವಾಹನ ಡಿಕ್ಕಿ ಹೊಡೆದಿದೆ.

ಪರಿಣಾಮ ಗಂಭೀರ ಗಾಯಗೊಂಡು ಶಿಕ್ಷಕ ಗೋಪಾಲ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕುಮಟಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವೀಲಿಂಗ್‌ ಪುಂಡರ ಹುಚ್ಚಾಟಕ್ಕೆ ಸವಾರ ಬಲಿ, ಮತ್ತೊಬ್ಬ ಗಂಭೀರ

ದೇವನಹಳ್ಳಿ: ವೀಲಿಂಗ್ (Wheeling Effect) ಪುಂಡರ ಹಾವಳಿಯಿಂದ ಈಗಾಗಲೇ ಸಾಕಷ್ಟು ಅಪಘಾತಗಳು (road Accident) ನಡೆದಿದೆ. ವೀಲಿಂಗ್‌ ಹುಚ್ಚಾಟಕ್ಕೆ ಯುವಕನೊಬ್ಬ ಪ್ರಾಣ ಬಿಟ್ಟಿದ್ದಾನೆ. ನಂದಿಬೆಟ್ಟದ ರಸ್ತೆಯಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ ಆಗಿದೆ. ಪರಿಣಾಮ ಒರ್ವ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ.

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಬೆಂಗಳೂರು ಮೂಲದ ಆದಿಲ್ (25) ಮೃತ ದುರ್ದೈವಿ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ರಜೆ ಇರುವುದರಿಂದ ಕೆಲ ವೀಲಿಂಗ್‌ ಪುಂಡರ ಹಾವಳಿ ನಂದಿಬೆಟ್ಟದ ರಸ್ತೆಯಲ್ಲಿ ಹೆಚ್ಚಿದೆ.

ರೋಡ್‌ ಮಧ್ಯೆ ವೀಲಿಂಗ್‌ ಪುಂಡರ ಹುಚ್ಚಾಟ

ಸದ್ಯ ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ದೇವನಹಳ್ಳಿಯ ಸರ್ಕಾರಿ ಆಸ್ವತ್ರೆಗೆ ರವಾನೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ ಸವಾರ ಸಾವು

ದೇವನಹಳ್ಳಿ ತಾಲೂಕಿನ ಕಾಮೇನಹಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುನೇಗೌಡ (೪೦) ಮೃತ ದುರ್ದೈವಿ.

ಮುನೇಗೌಡ ಕುಟುಂಬದ ಜತೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತಲೆಗೆ ಹೆಲ್ಮೆಟ್ ಹಾಕದ ಕಾರಣ ಬಲವಾದ ಪೆಟ್ಟಾಗಿ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಸವಾರನಿಗೂ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆ ದಾಖಲು ಮಾಡಲಾಗಿದೆ. ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version