Site icon Vistara News

Road Accident: ಅಣ್ಣನೊಂದಿಗೆ ಐಸ್‌ಕ್ರೀಮ್‌ ತರಲು ಹೋದ ಬಾಲಕ, ಟ್ರ್ಯಾಕ್ಟರ್‌ ಅಡಿ ಬಿದ್ದು ಸಾವು

Road Accident

ಆನೇಕಲ್‌/ಕೊಪ್ಪಳ: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಸಿ.ಕೆ ಪಾಳ್ಯದಲ್ಲಿ ವಾಟರ್‌ ಟ್ರ್ಯಾಕ್ಟರ್‌ ಹರಿದು ಬಾಲಕ ಮೃತಪಟ್ಟಿರುವ (Road Accident) ದುರ್ಘಟನೆ ನಡೆದಿದೆ. ಭುವನ್ (4) ಮೃತ ದುರ್ದೈವಿ.

ಮೃತ ಬಾಲಕ ಭುವನ್‌

ಭುವನ್‌ ತನ್ನ ಅಣ್ಣನೊಂದಿಗೆ ಐಸ್ ಕ್ರೀಮ್ ತರಲು ಬೇಕರಿಗೆ ಹೋಗುತ್ತಿದ್ದಾಗ ಈ ಅವಘಡ ನಡೆದಿದೆ. ಸಿ.ಕೆ ಪಾಳ್ಯದ ಕಿರಿದಾದ ರಸ್ತೆಯಲ್ಲಿ ಹೋಗುವಾಗ ಹೀಗಾಗಿದೆ. ರಸ್ತೆ ಬದಿಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಮಣ್ಣು ಹಾಕಲಾಗಿತ್ತು. ಈ ರಸ್ತೆಯಲ್ಲಿ ಭುವನ್‌ ತನ್ನ ಅಣ್ಣನ ಜತೆಗೆ ನಡೆದು ಹೋಗುತ್ತಿದ್ದಾಗ, ಎದುರಿಗೆ ವಾಟರ್‌ ಟ್ರ್ಯಾಕ್ಟರ್‌ ಬಂದಿದೆ. ಮಣ್ಣಿನ ಮೇಲೆ ನಡೆದು ಹೋಗಿ ಮತ್ತೆ ರಸ್ತೆಗೆ ಬಂದಾಗ ಟ್ರ್ಯಾಕ್ಟರ್‌ನ ಹಿಂಬದಿ ಚಕ್ರದಡಿ ಬಿದ್ದಿದ್ದಾನೆ. ಇದ್ಯಾವುದೂ ಅರಿಯದೆ ಚಾಲಕ ಟ್ರ್ಯಾಕ್ಟರ್‌ ಅನ್ನು ಬಾಲಕನ ಮೇಲೆ ಹರಿಸಿದ್ದಾನೆ.

ಜೂನ್‌ 6ರ ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತವಾಗುತ್ತಿದ್ದಂತೆ ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆಗೆ ಸೇರಿಸುವ ಮುನ್ನವೇ ಬಾಲಕ ಉಸಿರು ಚೆಲ್ಲಿದ್ದಾನೆ. ಇನ್ನು ಎರಡು ದಿನದಲ್ಲಿ ಶಾಲೆಗೆ ಹೋಗಬೇಕಾಗಿತ್ತು. ಖುಷಿ ಖುಷಿಯಾಗಿ ಓಡಾಡಿಕೊಂಡಿದ್ದ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಮಗನ ಅಗಲಿಕೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಟ್ರ್ಯಾಕ್ಟರ್‌ ಬಿಟ್ಟು ಪರಾರಿಯಾದ ಚಾಲಕ

ಟಿ. ಚಿನ್ನಣ್ಣರವರಿಗೆ ಸೇರಿದ ನೀರಿನ ಟ್ರ್ಯಾಕ್ಟರ್ ಎಂದು ತಿಳಿದು ಬಂದಿದೆ. ಕುಡಿದ ಮತ್ತಲ್ಲಿ ಟ್ರ್ಯಾಕ್ಟರ್‌ ಚಾಲನೆ ಮಾಡಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಅಪಘಾತ ಬಳಿಕ ವಾಹನವನ್ನು ಅಲ್ಲೆ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅತಿ ವೇಗ ತಂದ ಆಪತ್ತು; ಬೈಕ್‌ ಸವಾರ ಮೃತ್ಯು

ಬೈಕ್‌ ಅಪಘಾತದಲ್ಲಿ ಸವಾರನೊಬ್ಬ ಉಸಿರು ಚೆಲ್ಲಿರುವ ಘಟನೆ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ನಡೆದಿದೆ. ಅಲ್ಲಾಸಾಬ (31) ಮೃತ ದುರ್ದೈವಿ.

ಬೈಕ್‌ ಸ್ಕಿಡ್‌ ಆಗಿ ಬಿದ್ದು ಸವಾರ ಸಾವು

ಹೊಸಪೇಟೆ ತಾಲೂಕಿನ ಡಾಣಾಪುರದ ಗ್ರಾಮದ ಅಲ್ಲಾಸಾಬ, ಪತ್ನಿ ಹಾಗೂ ಚಿಕ್ಕ ಮಗುವಿನೊಂದಿಗೆ ತಾವರಗೇರಿಗೆ ಉರುಸಿಗೆ ಹೋಗಿದ್ದರು. ವಾಪಸ್ಸು ಗ್ರಾಮಕ್ಕೆ ಮರಳುವಾಗ ಬೈಕ್‌ ಸ್ಕಿಡ್ ಆಗಿದ್ದು, ಏಕಾಏಕಿ ರಸ್ತೆಗೆ ಎಗರಿ ಬಿದ್ದಿದ್ದಾರೆ. ರಭಸವಾಗಿ ಬಿದ್ದ ಪರಿಣಾಮ ಅಲ್ಲಾಸಾಬ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Mangalore News: ಮಂಗಳೂರು ನೈತಿಕ ಪೊಲೀಸ್‌ಗಿರಿ ಪ್ರಕರಣ; ಐವರ ವಿರುದ್ಧ ಕೇಸ್ ದಾಖಲು

ಬೈಕ್‌ನಲ್ಲಿದ್ದ ಅಲ್ಲಾಸಾಬ ಅವರ ಪತ್ನಿ, ಮಗು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಅವರಿಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತಿ ವೇಗ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version