ಬೀದರ್/ ವಿಜಯಪುರ: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಪಲ್ಟಿಯಾಗಿದೆ. 8 ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾಗಿದೆ. ಬೀದರ್‌ನ ಬಸವಕಲ್ಯಾಣ ತಾಲೂಕಿನ ಕಲಖೋರಾ ಗ್ರಾಮದ ಸಮೀಪ (Road Accident) ಈ ಘಟನೆ ಜರುಗಿದೆ.
ಬಸವಕಲ್ಯಾಣ ಘಟಕಕ್ಕೆ ಸೇರಿದ ಈ ಬಸ್ಸು ನೆರೆಯ ಕಲಬುರಗಿ ಜಿಲ್ಲೆಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಕಲಖೋರಾ ಗ್ರಾಮದ ಬಳಿ ವೇಗದಲ್ಲಿ ಚಲಿಸುತಿದ್ದಾಗ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಒಮ್ಮೆಲೇ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ.
ಬಸ್‌ನಲ್ಲಿ ಒಟ್ಟು 11 ಜನ ಮಾತ್ರ ಪ್ರಯಾಣಿಸುತಿದ್ದು, ಈ ಪೈಕಿ 8 ಜನ ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗಳಾಗಿವೆ. 4 ಜನ ಗಾಯಾಳುಗಳನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ನಾಲ್ವರಿಗೆ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್-ಬಸ್ ಮುಖಾಮುಖಿ ಡಿಕ್ಕಿ
ಟ್ರ್ಯಾಕ್ಟರ್ ಹಾಗೂ ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ವಾಹನಗಳೆಲ್ಲವೂ ಛಿದ್ರ ಛಿದ್ರಗೊಂಡಿವೆ. ಬಸ್‌ನಲ್ಲಿದ್ದ 20ಕ್ಕೂ ಆಧಿಕ ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಬಳಿ ಅಪಘಾತ ನಡೆದಿದೆ.
ಟ್ರ್ಯಾಕ್ಟರ್‌ನಲ್ಲಿ ಟಿಸಿ ಸಾಗಾಟ ಮಾಡಲಾಗುತ್ತಿದ್ದು, ಈ ವೇಳೆ ಬಸ್‌ಗೆ ಡಿಕ್ಕಿಯಾಗಿತ್ತು. ಇನ್ನು ಅಪಘಾತ ನಡೆದು ಎರಡು ಗಂಟೆ ಬಳಿಕ ಆಂಬ್ಯುಲೆನ್ಸ್ ಬಂದಿದ್ದಕ್ಕೆ ಸ್ಥಳೀಯರು ಅಸಮಾಧಾನ ಹೊರಹಾಕಿದರು. ಬಸ್‌ನಲ್ಲಿ ಸಿಲುಕಿ ನರಳಾಡುತ್ತಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿ ಹೊರಗೆಳೆದಿದ್ದಾರೆ. ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅತಿವೇಗ ತಂದ ಆಪತ್ತು; ಇಬ್ಬರ ಪ್ರಾಣ ಕಸಿದ ಅಪಘಾತಗಳು!
ಬೆಂಗಳೂರು: ಅತಿ ವೇಗ ಚಾಲನೆಯು ಚಾಲಕನೊಬ್ಬನ ಪ್ರಾಣವನ್ನೇ ಕಸಿದುಕೊಂಡಿದೆ. ಮಧ್ಯರಾತ್ರಿ ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು (Road Accident) ಬರುವಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಿರಣ್ (28) ಮೃತ ಚಾಲಕ.
ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ 1.20ಕ್ಕೆ ಈ ಅಪಘಾತ ನಡೆದಿದೆ. ಮಹರಾಜ ಪ್ಯಾಲೇಸ್ ಹೋಟೆಲ್ ಕಡೆಯಿಂದ ರೀತು ಆಸ್ಪತ್ರೆ ಕಡೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಅತಿ ವೇಗ ಮತ್ತು ನಿರ್ಲಕ್ಷ್ಯತೆಯಿಂದ ಬಂದು ಫುಟ್ ಪಾತ್ ಮೇಲಿರುವ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿ ರಸಭಕ್ಕೆ ಕಿರಣ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಲಘಟ್ಟಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತವಾದ ಕಾರನ್ನು ವಶಕ್ಕೆ ಪಡೆದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Fire Accident : ಬೆಂಕಿಗೆ ಸಿಲುಕಿ ಸುಟ್ಟು ಕರಕಲಾದ ಹಸುಗಳು! ನಿಂತಲ್ಲೇ ಹೊತ್ತಿ ಉರಿದ ಲಾರಿ
ಕಾರು-ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗೊಲ್ಲಹಳ್ಳಿ ಬಳಿ ಕಾರು ಮತ್ತು ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಮುಖಾಮುಖಿ ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳು ಜಖಂ ಗೊಂಡಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಶಿವಕುಮಾರ್( 32) ಮೃತ ದುರ್ದೈವಿ. ಅನಂತರಾಮ್( 37) ಗಾಯಾಳು. ಇವರಿಬ್ಬರು ಬೆಂಗಳೂರಿನ ಬಾಗಲುಗುಂಟೆ ನಿವಾಸಿಗಳಾಗಿದ್ದು, ಗಾಯಾಳು ಅನಂತ ರಾಮ್‌ಗೆ ಚಿಕಿತ್ಸೆ ಮುಂದುವರಿದಿದೆ. ಗೌರಿಬಿದನೂರು ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಹೋಗುವಾಗ ಅಪಘಾತ ನಡೆದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.