Site icon Vistara News

Road Accident : ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ; ಗಾಯಾಳುಗಳ ಆರೋಗ್ಯ ವಿಚಾರಿಸಿದ ಲಕ್ಷ್ಮೀ ಹೆಬ್ಬಾಳಕರ್

Bus Accident in belgavi

ಬೆಳಗಾವಿ: ಬೆಳಗಾವಿ ತಾಲೂಕಿನ ಹಲಗಾ ಬಳಿ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ (Road Accident) ಪಲ್ಟಿಯಾಗಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 10 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಬೆಳಗಾವಿಯಿಂದ ಕೊಪ್ಪ ಗ್ರಾಮಕ್ಕೆ ತೆರಳುವಾಗ ಈ ಅವಘಡ ನಡೆದಿದೆ. ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ರಸ್ತೆ ಬದಿಗೆ ಉರುಳಿದೆ. ಅಲ್ಲಿದ್ದ ಸ್ಥಳೀಯರು ಕೂಡಲೇ ಬಸ್‌ನಲ್ಲಿ ಸಿಲುಕಿ ನರಳಾಡುತ್ತಿದ್ದವರನ್ನು ರಕ್ಷಿಸಿದ್ದಾರೆ. ಶನಿವಾರ ಆಗಿದ್ದರಿಂದ ಬಸ್‌ನಲ್ಲಿ ಹೆಚ್ಚಿನ ಜನರು ಇರಲಿಲ್ಲ. ಹೀಗಾಗಿ ದೊಡ್ಡ ಅನಾಹುತವೊಂದು ತಪ್ಪಿದೆ.

ಚಾಲಕ ಸೇರಿ ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಿರೇಬಾಗೇವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಎಲ್ಲರಿಗೂ ಧೈರ್ಯವನ್ನು ತುಂಬಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆಯನ್ನು ನೀಡಿದರು.

ಇದನ್ನೂ ಓದಿ: Medical Negligence : ಕೆಮ್ಮು, ಕಫಾ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಮೂರೇ ಗಂಟೆಯಲ್ಲಿ ಸಾವು!

ಚಾರ್ಮಾಡಿ ಘಾಟಿಯಲ್ಲಿ ಮಂಜು; ದಾರಿ ಕಾಣದೆ 120 ಅಡಿ ಪ್ರಪಾತಕ್ಕೆ ಉರುಳಿದ ಲಾರಿ

ಚಿಕ್ಕಮಗಳೂರು: ಅತ್ಯಂತ ಕಡಿದಾದ ತಿರುವುಗಳನ್ನು ಹೊಂದಿರುವ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ಈಗ ಮಳೆ ಮತ್ತು ಮಂಜಿನಾಟ (Rain and dew) ಜೋರಾಗಿದೆ. ಹೀಗಾಗಿ ದಾರಿ ಕಾಣದೆ ಹಲವಾರು ಅಪಘಾತಗಳು (Accident at Charmadi Ghat) ನಡೆಯುತ್ತಿವೆ. ಇವುಗಳ ಪೈಕಿ ಕೆಲವೊಂದು ಅತ್ಯಂತ ಭಯಾನಕವಾಗಿರುತ್ತದೆ. ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಶನಿವಾರ ಬೆಳಗ್ಗೆ ಲಾರಿಯೊಂದು 120 ಆಳದ ಪ್ರಪಾತಕ್ಕೆ ಉರುಳಿದೆ (Lorry jumps into 120 feet gorge in Charmadi Ghat).

ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲಿ ಸಾಗಿಸುತ್ತಿದ್ದ ಲಾರಿಯೊಂದು ಸೋಮನಕಾಡು ಪ್ರದೇಶದಲ್ಲಿ ಬಂದಾಗ ದಾರಿ ಕಾಣದೆ ತಡೆಗೋಡೆಗೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ಕಳೆದುಕೊಂಡು ಆಳ ಕಮರಿಗೆ ಉರುಳಿದೆ.

ಲಾರಿಯಲ್ಲಿದ್ದವರ ರಕ್ಷಣೆಗೆ ಮಾಡುತ್ತಿರುವುದು.

ಲಾರಿ ತಡೆಗೋಡೆಯನ್ನು ದಾಟಿದ ಬಳಿಕ ಕೆಳಗೆ ಇರುವುದು ಮಹಾಪ್ರಪಾತ. ಸುಮಾರು 500 ಅಡಿಗಿಂತಲೂ ಹೆಚ್ಚು ಆಳದ ಕಮರಿ. ಲಾರಿ ರಸ್ತೆ ಬಿಟ್ಟು ತಡೆಗೋಡೆಯನ್ನು ದಾಟಿ ಇಳಿಜಾರಿನಲ್ಲಿ ಜಾರಿ ಹೋಗಿತ್ತು. ಇನ್ನೇನು ದೊಡ್ಡ ಕಂದರಕ್ಕೆ ಬೀಳುತ್ತಿದ್ದಂತೆಯೇ ಅಲ್ಲೊಂದು ರಕ್ಷಣೆ ಸಿಕ್ಕಿತ್ತು. ಅದುವೇ ಒಂದು ದೊಡ್ಡ ಮರ.

ಜಾರಿಕೊಂಡು ಹೋಗುತ್ತಿದ್ದ ಲಾರಿಯನ್ನು ಒಂದು ದೊಡ್ಡ ಮರ ತಡೆದು ನಿಲ್ಲಿಸಿದೆ. ಈ ಕಾರಣದಿಂದಾಗಿ ಲಾರಿ ಕಣ್ಣಿಗೆ ಕಾಣದಷ್ಟು ಆಳದ ಕಮರಿಗೆ ಬೀಳುವುದರಿಂದ ಸ್ವಲ್ಪದರಲ್ಲಿ ಬಚಾವಾಗಿದೆ. ಹಾಗಂತ ಇದೇನೂ ಕಡಿಮೆ ಆಳವಲ್ಲ. ಅಲ್ಲಿಂದ ಮೇಲೆ ಬರುವುದು, ಲಾರಿಯನ್ನು ಮೇಲೆ ತರುವುದು ಭಾರಿ ಸಾಹಸದ ಕೆಲಸವೇ ಸರಿ.

ಲಾರಿಯೊಂದು ಹೀಗೆ ಬಿದ್ದಿರುವುದನ್ನು ಗಮನಿಸಿದ ಆ ಮಾರ್ಗದಲ್ಲಿ ಸಾಗುವ ವಾಹನಿಗರು ಕೂಡಲೇ ಸ್ಥಳೀಯ ರಕ್ಷಕರ ಗಮನಕ್ಕೆ ತಂದರು. ಅವರು ಬಂದು ದೊಡ್ಡ ಹಗ್ಗಗಳ ಮೂಲಕ ಅಪಾಯಕಾರಿಯಾದ ಲಾರಿ ಬಿದ್ದ ಜಾಗವನ್ನು ತಲುಪಿದ್ದಾರೆ.

ಲಾರಿಯಲ್ಲಿ ಚಾಲಕ ಮತ್ತು ಕ್ಲೀನರ್‌ ಇದ್ದು, ಅವರು ಅಪಘಾತ ಮತ್ತು ಆಘಾತಗಳಿಂದ ಚೇತರಿಸಿಕೊಳ್ಳಲಾಗದೆ, ಏನೂ ಮಾಡಲಾಗದೆ ಕಂಗಾಲಾಗಿ ಕುಳಿತಿದ್ದರು. ಅವರನ್ನು ರಕ್ಷಕರ ತಂಡ ಹಗ್ಗದ ಸಹಾಯದಿಂದ ಮೇಲಕ್ಕೆ ತಂದು ಆಸ್ಪತ್ರೆಗೆ ಸೇರಿಸಿದೆ.

ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮ್ಮನ್ನು ರಕ್ಷಿಸಿದ ಮರ ಮತ್ತು ಹಗ್ಗದ ಮೂಲಕ ಮೇಲೆ ಬರಲು ಸಹಾಯ ಮಾಡಿದ ರಕ್ಷಕರಿಗೆ ಕೃತಜ್ಞತೆ ಹೇಳಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ವ್ಯಾಪ್ತಿಗೆ ಈ ಪ್ರದೇಶ ಬರುತ್ತದೆ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version