ಆರೋಗ್ಯ
Medical Negligence : ಕೆಮ್ಮು, ಕಫಾ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಮೂರೇ ಗಂಟೆಯಲ್ಲಿ ಸಾವು!
Medical Negligence : ದೇವನಹಳ್ಳಿಯಲ್ಲಿ ಕೆಮ್ಮು,ಕಫ ಎಂದು ಆಸ್ಪತ್ರೆಗೆ ದಾಖಲಾದ ಬಾಲಕಿಯೊಬ್ಬಳು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾಳೆ ಎಂಬ ಆರೋಪವೊಂದು ಕೇಳಿ ಬಂದಿದೆ. ಇತ್ತ ಕಲಬುರಗಿಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.
ದೇವನಹಳ್ಳಿ/ಕಲಬುರಗಿ: ಪ್ರತ್ಯೇಕ ಕಡೆಗಳಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ (Medical Negligence) ಎರಡು ಜೀವಗಳು ಪ್ರಾಣಬಿಟ್ಟಿವೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಕೆಮ್ಮು, ಕಫ ಎಂದು ಆಸ್ಪತ್ರೆ ಸೇರಿದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ರಾಬಿಯಾ ( 6 ) ಮೃತ ದುರ್ದೈವಿ.
ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ದೇವನಹಳ್ಳಿಯಲ್ಲಿರುವ ಆಕಾಶ್ ಆಸ್ವತ್ರೆಗೆ ವಿಜಯಪುರ ನಗರದ ದಾದಾಪೀರ್ ನಜಿಯಾ ಬಾನು ದಂಪತಿ ರಾಬಿಯಾಳನ್ನು ದಾಖಲು ಮಾಡಿದ್ದರು.
ಕೆಮ್ಮು, ಕಫದಿಂದ ಬಳಲುತ್ತಿದ್ದ ರಾಬಿಯಾಗೆ ಮೂರು ದಿನದಿಂದ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ ಏಕಾಏಕಿ ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಬಳಿಕ ಮೂರು ಗಂಟೆ ನಂತರ ರಾಬಿಯಾ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದಕ್ಕೆ ಮಗಳು ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಮೂರು ದಿನದಿಂದ ಚೆನ್ನಾಗಿ ಓಡಾಡುತ್ತಿದ್ದ ಮಗಳನ್ನು ವೈದ್ಯರು ಬಲಿ ಪಡೆದಿದ್ದಾರೆ ಎಂದು ಆಸ್ವತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Physical Abuse : ನನ್ನೊಟ್ಟಿಗೆ ಇರು ಎಂದ ಫೈನಾನ್ಸ್ ಸಿಬ್ಬಂದಿಗೆ ಮಹಿಳೆಯಿಂದ ಚಪ್ಪಲಿ ಸೇವೆ!
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವೃದ್ಧೆ ಸಾವು
ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಭವನದಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ 60 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದ ನಿವಾಸಿ ನಾಗಮ್ಮಮಲ್ಲಪ್ಪ (60) ಮೃತರು.
ನಾಗಮ್ಮ ಶುಕ್ರವಾರ ಅಮಾವಾಸ್ಯೆ ಹಿನ್ನೆಲೆ ಕಡಕೋಳ ಮಡಿವಾಳೇಶ್ವರ ಮಠಕ್ಕೆ ಆಗಮಿಸಿದ್ದರು. ರಾತ್ರಿ ವಾಸ್ತವ್ಯ ಮಾಡಿ ಶನಿವಾರ ಬೆಳಗ್ಗೆ ಸ್ನಾನ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕೂಡಲೇ ಅವರನ್ನು ಯಡ್ರಾಮಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ವೈದ್ಯರು ಆಗಮಿಸದೆ ಇರುವುದರಿಂದ ಆಸ್ಪತ್ರೆಯಲ್ಲೆ ಮೃತಪಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಆರೋಗ್ಯ
Side Effects of Sugar: ಸಿಹಿ ತಿನ್ನಬೇಕು, ಆದರೆ ಎಷ್ಟು?
Side Effects of Sugar: ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ (Added Sugar) ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು.
ಬೆಂಗಳೂರು: ಶ್ರಾವಣದ ಹಬ್ಬಗಳ ಸಾಲು (Side Effects of Sugar) ಮುಗಿದಿದೆ. ಮೊನ್ನೆಯಷ್ಟೇ ಭಾದ್ರಪದದ ಚತುರ್ಥಿಯನ್ನೂ ಆಚರಿಸಿದ್ದಾಯ್ತು. ಇನ್ನೀಗ ನವರಾತ್ರಿ, ಆದಾದ ಮೇಲೆ ದೀಪಾವಳಿ. ಇಷ್ಟೊಂದು ಹಬ್ಬಗಳ ಆಚರಣೆ ಎಂದರೆ ಹುಡುಗಾಟವೇ? ಹೀಗೆ ಸಾಲು ಸಾಲು ಹಬ್ಬಗಳನ್ನು ಸಿಹಿ ತಿನ್ನದೆ ಕಳೆಯುವುದಾದರೂ ಹೇಗೆ? ಸಿಹಿ ಇಲ್ಲದ್ದು ಹಬ್ಬ ಎನಿಸೀತೆ? ಹಾಗೆಂದು ಪ್ರತೀ ಹಬ್ಬಕ್ಕೂ ಗಡದ್ದಾಗಿ ಸಿಹಿ ಬಾರಿಸಿದರೆ ನಮ್ಮ ಆರೋಗ್ಯದ ಗತಿ ಏನು? ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದರಿಂದ ನಮ್ಮ ದೇಹದ ಮೇಲಾಗುವ ಪರಿಣಾಮಗಳೇನು (What Happens When You Have Too Much Sugar) ಎನ್ನುವುದನ್ನು ತಿಳಿಯೋಣವೇ?
ಸಕ್ಕರೆ ಬೇಕು!
ಹೌದು, ನಮ್ಮ ದೇಹಕ್ಕೆ ಸಕ್ಕರೆಯೂ ಬೇಕು. ಸಕ್ಕರೆಯೆಂದರೆ ಒಂದು ತೆರನಾದ ಪಿಷ್ಟ. ಅದನ್ನು ವಿಘಟಿಸುವ ದೇಹ ಗ್ಲೂಕೋಸ್ ಆಗಿ ಪರಿವರ್ತಿಸಿ, ತನ್ನ ಶಕ್ತಿಯ ಅಗತ್ಯಗಳಿಗೆ ಬಳಸಿಕೊಳ್ಳುತ್ತದೆ. ಜೇನುತುಪ್ಪ, ಖರ್ಜೂರ, ಹಣ್ಣುಗಳು, ಡೈರಿ ಉತ್ಪನ್ನಗಳು ಮುಂತಾದ ಹಲವಾರು ಆಹಾರಗಳಲ್ಲಿ ಸಕ್ಕರೆ ತಾನಾಗಿಯೇ ಇರುತ್ತದೆ. ಇಂಥ ನೈಸರ್ಗಿಕ ಸಕ್ಕರೆಯಂಶ ನಮ್ಮ ದೇಹಕ್ಕೆ ಬೇಕು. ಮೆದುಳು, ನರವ್ಯೂಹಗಳು ಮತ್ತು ಕೆಂಪು ರಕ್ತಕಣಗಳಂಥವು ಸರಿಯಾಗಿ ಕೆಲಸ ಮಾಡಲು ಈ ನೈಸರ್ಗಿಕ ಸಕ್ಕರೆಯ ಅಗತ್ಯವಿದೆ.
ಆದರೆ ನಿಸರ್ಗದತ್ತವಾದ ಸಕ್ಕರೆ ಸತ್ವದ ಹೊರತಾಗಿ ಹೆಚ್ಚುವರಿ, ಅಂದರೆ ನಾವೇ ಸೇರಿಸಿದ ಸಕ್ಕರೆಯಂಶ ದೇಹಕ್ಕೇನೂ ಬೇಕೆಂದಿಲ್ಲ. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು. ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ತಜ್ಞರ ಪ್ರಕಾರ, ವಯಸ್ಕರು ದಿನವೊಂದಕ್ಕೆ 30 ಗ್ರಾಂ ಗಿಂತ ಹೆಚ್ಚಿನ ಸಕ್ಕರೆಯನ್ನು ತಿನ್ನಬಾರದು. ಮಕ್ಕಳಿಗೆ 25 ಗ್ರಾಂ ಒಳಗೇ ಸಾಕು. ಇದರಲ್ಲಿ ನಮ್ಮ ಆಹಾರದಲ್ಲಿರುವ ನೈಸರ್ಗಿಕ ಸಕ್ಕರೆಯನ್ನ ಸೇರಿಸಬೇಕಿಲ್ಲ.
ಇದನ್ನೂ ಓದಿ: National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?
ಹೆಚ್ಚು ತಿಂದರೇನಾಗುತ್ತದೆ?
ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಅತಿಯಾಗಿ ಸಿಹಿ ತಿಂದಾಗ ದೇಹದ ಶಕ್ತಿ ಹೆಚ್ಚುವ ಬದಲು, ಸುಸ್ತು, ಆಯಾಸ ಕಾಣಿಸಬಹುದು. ಮೂಡ್ ಬದಲಾವಣೆ, ಹೊಟ್ಟೆ ಉಬ್ಬರ, ಅಜೀರ್ಣ, ವಾಕರಿಕೆ ಇಂಥವು ಅಲ್ಪಕಾಲೀನ ಪರಿಣಾಮಗಳಾಗಿ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚು ಸಿಹಿ ತಿನ್ನುವುದನ್ನು ಮುಂದುವರಿಸಿದರೆ ದೀರ್ಘಕಾಲದಲ್ಲಿ ಪರಿಣಾಮಗಳು ಸಮಸ್ಯೆಗಳಾಗಿ ಮಾರ್ಪಡುವುದು ನಿಶ್ಚಿತ.
ಟೈಪ್-2 ಮಧುಮೇಹ
ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಏರದಂತೆ ನಿಯಂತ್ರಿಸಲು ನಮಗೆ ಇನ್ಸುಲಿನ್ ಎಂಬ ಚೋದಕ ಬೇಕು. ಇದನ್ನು ಉತ್ಪತ್ತಿ ಮಾಡುವುದು ನಮ್ಮ ಮೇದೋಜೀರಕ ಗ್ರಂಥಿ. ಆಹಾರದಲ್ಲಿರುವ ಸಕ್ಕರೆಯಂಶ ರಕ್ತಕ್ಕೆ ಸೇರುತ್ತಿದ್ದಂತೆ ಇನ್ಸುಲಿನ್ ಉತ್ಪತ್ತಿ ಮಾಡುವಂತೆ ಈ ಗ್ರಂಥಿಗೆ ಸಂದೇಶ ಹೋಗುತ್ತದೆ. ಆಗ ರಕ್ತದಲ್ಲಿ ಸಕ್ಕರೆ ಮಟ್ಟ ಏರದಂತೆ ನಿಯಂತ್ರಣವಾಗಿ, ಉಳಿದ ಅಂಗಾಂಗಗಳಿಗೆ ಶಕ್ತಿ ಪೂರೈಕೆಯಾಗುತ್ತದೆ. ಒಂದೊಮ್ಮೆ ದೇಹದ ಕೋಶಗಳು ಇನ್ಸುಲಿನ್‌ಗೆ ಸ್ಪಂದಿಸುವುದನ್ನು ನಿಲ್ಲಿಸಿದರೆ ಸಮಸ್ಯೆ ಶುರುವಾಗುತ್ತದೆ. ಹೆಚ್ಚೆಚ್ಚು ಸಿಹಿ ತಿಂದರೆ ನಮ್ಮ ಮೇದೋಜೀರಕ ಗ್ರಂಥಿ ಹೆಚ್ಚು ಕೆಲಸ ಮಾಡಬೇಕು, ಅತಿಯಾಗಿ ಉತ್ಪತ್ತಿಯಾಗುವ ಇನ್ಸುಲಿನ್‌ಗೆ ದೇಹ ಕೆಲವೊಮ್ಮೆ ಸ್ಪಂದಿಸದೇ (Insulin resistance) ಹೋಗಬಹುದು. ಇದೇ ಅವಸ್ಥೆಯನ್ನು ಟೈಪ್-2 ಮಧುಮೇಹ ಎನ್ನುತ್ತೇವೆ.
ಬೊಜ್ಜು
ಈಗ ಆರೇಳು ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ವಿಶ್ವದಲ್ಲಿ 100 ಕೋಟಿಗೂ ಅಧಿಕ ಮಂದಿ ಬೊಜ್ಜಿನಿಂದಲೇ (Obesity) ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಸಂಸ್ಕರಿಸಿದ ಆಹಾರಗಳಿಂದ (ಜ್ಯೂಸ್, ಸೋಡಾ, ಕೇಕ್ ಇತ್ಯಾದಿ) ದೇಹ ಸೇರುವ ಸಕ್ಕರೆಯಿಂದಲೇ ಬೊಜ್ಜಿಗೆ ತೊತ್ತಾದವರು. ಅತಿಯಾಗಿ ಸಕ್ಕರೆ ತಿನ್ನುವುದರಿಂದ ದೇಹಕ್ಕೆ ಬೇಕಾಗಿದ್ದಕ್ಕಿಂತ ಹೆಚ್ಚೇ ಕ್ಯಾಲರಿ ದೊರೆಯುತ್ತದೆ; ಆದರೆ ಇವೆಲ್ಲವೂ ಪೋಷಕಾಂಶವಿಲ್ಲದ ಸತ್ವಹೀನ ಕ್ಯಾಲರಿಗಳು. ಹಾಗಾಗಿ ಪೋಷಕಾಂಶಗಳ ಕೊರತೆಯಾಗುತ್ತಿದ್ದಂತೆ ಇನ್ನಷ್ಟು ತಿನ್ನಬೇಕೆಂಬ ಬಯಕೆ ದೇಹಕ್ಕೆ ಮೂಡುತ್ತದೆ. ತೂಕ ಹೆಚ್ಚಲು ಇಷ್ಟು ಸಾಲದೇ?
ಇದನ್ನೂ ಓದಿ: PM Modi Birthday: 73ರಲ್ಲೂ 23ರ ರಣೋತ್ಸಾಹ; ಇಲ್ಲಿದೆ ಮೋದಿ ಆರೋಗ್ಯದ ಗುಟ್ಟು
ಹೃದಯದ ತೊಂದರೆಗಳು
ಸಕ್ಕರೆಭರಿತ ಆಹಾರಗಳು ಬೊಜ್ಜು ಹೆಚ್ಚಿಸುವುದು ಮಾತ್ರವಲ್ಲ, ದೇಹದಲ್ಲಿ ಟ್ರೈಗ್ಲಿಸರೈಡ್ ಅಂಶವನ್ನು ಹೆಚ್ಚಿಸುತ್ತವೆ. ಇದೇ ಮುಂದುವರಿದು ರಕ್ತನಾಳಗಳಲ್ಲಿ ಕೊಬ್ಬು ಜಮೆಯಾಗುತ್ತದೆ; ರಕ್ತದೊತ್ತಡ ಏರುತ್ತದೆ. ಮಧುಮೇಹದ ಜೊತೆಗೆ ಇವಿಷ್ಟು ಸಮಸ್ಯೆಗಳು ಸಾಕು ಹೃದಯವನ್ನು ಸಂಕಷ್ಟಕ್ಕೆ ಈಡು ಮಾಡಲು. ಇದರಿಂದ ಹೃದಯದ ತೊಂದರೆಗಳು ಮಾತ್ರವಲ್ಲ. ಪಾರ್ಶ್ವವಾಯುವಿನ ಭೀತಿಯೂ ಎದುರಾಗುತ್ತದೆ.
ಫ್ಯಾಟಿ ಲಿವರ್
ದೇಹದಲ್ಲಿ ಖರ್ಚಾಗದೆ ಉಳಿಯುವ ಶಕ್ತಿಯೆಲ್ಲಾ ಜಮೆಯಾಗುವುದು ಕೊಬ್ಬಿನ ರೂಪದಲ್ಲಿ. ಇಂಥ ಹೆಚ್ಚುವರಿ ಕೊಬ್ಬು ಜಮೆಯಾಗುವುದು ಯಕೃತ್ತಿನಲ್ಲಿ. ಆಗಿಂದಾಗ ಈ ಕೊಬ್ಬು ಖಾಲಿಯಾಗುತ್ತಿದ್ದರೆ ಹೆಚ್ಚಿನ ಜಮಾವಣೆ ಇರುವುದಿಲ್ಲ. ಆದರೆ ಅನಗತ್ಯ ಕ್ಯಾಲರಿಗಳು ಹೆಚ್ಚಾಗಿ ಕೊಬ್ಬು ಹೆಚ್ಚೆಚ್ಚು ದಾಸ್ತಾನಾಗುವುದಕ್ಕೆ ಪ್ರಾರಂಭವಾದರೆ, ಯಕೃತ್‌ನಲ್ಲಿದ್ದ ಆರೋಗ್ಯಪೂರ್ಣ ಕೋಶಗಳು ನಾಶವಾಗಿ ಈ ಕೊಬ್ಬಿನ ಕೋಶಗಳೇ ತುಂಬಲಾರಂಭಿಸುತ್ತವೆ. ಫ್ಯಾಟಿ ಲಿವರ್ ಕಾಡುವುದು ಹೀಗೆ. ಮದ್ಯಪಾನ ಮಾಡದೆಯೂ ಯಕೃತ್ತಿನ ಕೊಬ್ಬು ಇತ್ತೀಚೆಗೆ ಬಹಳಷ್ಟು ಜನರನ್ನು ಕಾಡಲು ಇದುವೇ ಕಾರಣ.
ಅತಿಯಾದ ಸಿಹಿಯಿಂದ ಹಲ್ಲು ಮತ್ತು ಬಾಯಿಯ ಆರೋಗ್ಯವೂ ಕ್ರಮೇಣ ನಶಿಸುತ್ತದೆ. ಅತಿ ಸಿಹಿ ಉತ್ಪತ್ತಿ ಮಾಡುವ ಆಮ್ಲಗಳಿಗೆ ಹಲ್ಲುಗಳ ಎನಾಮಲ್ ನಾಶವಾಗಿ, ಕುಳಿಗಳು ಬೀಳುತ್ತವೆ. ಒಸಡುಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಹಾಗಾಗಿ ದೇಹಕ್ಕೆ ಅಗತ್ಯವಾದ ಸಕ್ಕರೆಯಂಶವನ್ನು ನೈಸರ್ಗಿಕ ತಿನಿಸುಗಳಿಂದ ಒದಗಿಸುವುದು ಕ್ಷೇಮವೇ ಹೊರತು ನಾವೇ ಬೆಲ್ಲ/ ಸಕ್ಕರೆ ಸುರಿದು ಮಾಡಿದ ಸಿಹಿತಿಂಡಿಗಳಿಂದ ಅಲ್ಲ. ಇದರರ್ಥ ಸಿಹಿ ತಿನ್ನುವುದನ್ನು ಸಂಪೂರ್ಣ ನಿಲ್ಲಿಸಬೇಕೆಂದಲ್ಲ. ಆದರೆ ತಿನ್ನುವ ಪ್ರಮಾಣದ ಮೇಲೆ ಖಂಡಿತವಾಗಿ ಮಿತಿ ಇರಲೇಬೇಕು.
ಆರೋಗ್ಯ
Pneumonia Remedy: ನ್ಯುಮೋನಿಯಾಗೆ ಸೂಪರ್‌ಫುಡ್ ಯಾವುವೆಂದು ತಿಳಿದಿದೆಯೇ?
ನ್ಯುಮೋನಿಯಾ ಸಂದರ್ಭ ಹಾಗೂ, ಗುಣಮುಖರಾದ ಮೇಲೂ ಯಾವೆಲ್ಲ ಕೆಲವು ಆಹಾರಗಳು ನ್ಯುಮೋನಿಯಾದಿಂದ ಬಹುಬೇಗನೆ ಗುಣಮುಖರಾಗುವಂತೆ (pneumonia remedy) ಮಾಡುತ್ತದೆ ಎಂಬುದನ್ನು ನೋಡೋಣ.
ಕೆಲವೊಮ್ಮೆ ಕೆಲವರಿಗೆ ಸಾಮಾನ್ಯ ಜ್ವರ ನ್ಯುಮೋನಿಯಾಕ್ಕೆ (pneumonia) ತಿರುಗುವುದುಂಟು. ಸಾಮಾನ್ಯ ಜ್ವರ (viral fever) ಎಂದುಕೊಂಡು ಔಷಧಿಗಳನ್ನು ತೆಗೆದುಕೊಂಡರೂ, ದಿನಗಳೆದಂತೆ, ಕಫ, ಮೂಗು ಕಟ್ಟಿರುವುದು, ಕಡಿಮೆಯಾಗದ ಜ್ವರ, ಜೊತೆಗೆ ಚಳಿ ಎಲ್ಲವೂ ಉಲ್ಬಣಿಸಿ ಇದು ನ್ಯುಮೋನಿಯಾ ಎಂಬ ತೀರ್ಮಾನಕ್ಕೆ ವೈದ್ಯರು ಪರೀಕ್ಷೆಗಳಿಂದ ದೃಢಪಡಿಸುತ್ತಾರೆ. ಶ್ವಾಸಕೋಶದೊಳಗಿನ ಗಾಳಿಚೀಲಗಳಿಗೂ ಇನ್‌ಫೆಕ್ಷನ್ (Infection) ಹರಡಿಕೊಂಡು ಎದೆನೋವು ಕೂಡಾ ಕಾಣಿಸಿಕೊಳ್ಳುತ್ತದೆ. ಉಸಿರಾಟಕ್ಕೆ ಕಷ್ಟವಾಗುವುದು, ನಿರ್ಜಲೀಕರಣ (dehydration), ನಿತ್ರಾಣ, ಉಬ್ಬಸದಂತಹ ಸಮಸ್ಯೆ, ಕೆಮ್ಮಿನ ಸಂದರ್ಭ ಹಸಿರು ಮಿಶ್ರಿತ ಹಳದಿ ಬಣ್ಣದ ಕಫ ಹೊರಗೆ ಬರುವುದು, ಕೆಲವೊಮ್ಮೆ ರಕ್ತವೂ ಸೇರಿ ಕಫ ಹೊರಗೆ ಬರುವುದು ಇತ್ಯಾದಿಗಳೆಲ್ಲ ಆಗಿ ನ್ಯುಮೋನಿಯಾ ಬಹಳವಾಗಿ ಕಾಡುತ್ತದೆ. ಹೀಗೆ ನ್ಯುಮೋನಿಯಾ ಜ್ವರದಿಂದ ಬಳಲಿ ವೈದ್ಯರ ಆರೈಕೆಯ ನಂತರ ಗುಣಮುಖರಾದರೂ ಕೂಡಾ, ಬಹಳ ದಿನಗಳವರೆಗೆ ಶಿಸ್ತುಬದ್ಧ ಆಹಾರ ಸೇವನೆ, ಆರೋಗ್ಯದ ಬಗ್ಗೆ ಕಾಳಜಿ ಎಲ್ಲವೂ ಅತ್ಯಂತ ಅಗತ್ಯ. ಇದರ ನಿರ್ಲಕ್ಷ್ಯ ಸಲ್ಲದು. ಅತ್ಯಂತ ಕಾಳಜಿಯುಕ್ತ ಆಹಾರ ಸೇವನೆಯೂ (Food habit) ಅಗತ್ಯ. ಹಾಗಾಗಿ ಬನ್ನಿ, ನ್ಯುಮೋನಿಯಾ ಸಂದರ್ಭ ಹಾಗೂ, ಗುಣಮುಖರಾದ (pneumonia cure) ಮೇಲೂ ಯಾವೆಲ್ಲ ಕೆಲವು ಆಹಾರಗಳು ನ್ಯುಮೋನಿಯಾದಿಂದ ಬಹುಬೇಗನೆ ಗುಣಮುಖರಾಗುವಂತೆ (pneumonia remedy) ಮಾಡುತ್ತದೆ ಎಂಬುದನ್ನು ನೋಡೋಣ.
1. ಜೇನುತುಪ್ಪ: ಜೇನುತುಪ್ಪ ಶ್ವಾಸಕೋಶದ ಸಮಸ್ಯೆಗಳಿಗೆ ಅತ್ಯಂತ ಒಳ್ಳೆಯದು. ಇದು ಕಫ, ಶೀತ, ನೆಗಡಿ ಮತ್ತಿತರ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರ ನೀಡುತ್ತದೆ. ನಿತ್ಯವೂ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಅಥವಾ ಜೇನುತುಪ್ಪದ ಜೊತೆಗೆ ತುಳಸಿರಸ, ಶುಂಠಿರಸ ಸೇರಿಸಿ ಸೇವಿಸುವುದರಿಂದ ಕಫ ಬಹುಬೇಗನೆ ಕರಗಿ ಶ್ವಾಸಕೋಶಗಳಿಗೆ ಆರಾಮ ದೊರೆಯುತ್ತದೆ.
2. ಅರಿಶಿನ: ನಿತ್ಯವೂ ಭಾರತೀಯರು ಅಡುಗೆಯಲ್ಲಿ ಬಳಸುವ ಮಸಾಲೆಗಳಲ್ಲಿ ಒಂದು. ಇದನ್ನು ನಮ್ಮ ಹಲವು ಸಮಸ್ಯೆಗಳಿಗೂ ನಮಗೆ ಬಳಸಿ ಗೊತ್ತು. ಯಾಕೆಂದರೆ ಇದು ತನ್ನಲ್ಲಿ ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಇದರ ಸೇವನೆಯಿಂದಲೂ ಕೂಡಾ ಇನ್‌ಫೆಕ್ಷನ್ ಬಹುಬೇಗನೆ ದೇಹದಿಂದ ವಾಸಿಯಾಗಿ, ಆರೋಗ್ಯ ನಮ್ಮದಾಗುತ್ತದೆ.
3. ಶುಂಠಿ: ಶೀತ, ಕಫ, ನೆಗಡಿಯಂತಹ ಸಮಸ್ಯೆಗಳಿಗೆ ಎಲ್ಲರಿಗೂ ಮೊದಲು ನೆನಪಾಗುವ ಮನೆಮದ್ದು ಎಂದರೆ ಶುಂಠಿ. ಈ ಶುಂಠಿಯೂ ನ್ಯುಮೋನಿಯಾದಂತಹ ಸಮಸ್ಯೆಗೂ ಕೂಡಾ ಅತಯುತ್ತಮ ಕೆಲಸವನ್ನೇ ಮಾಡುತ್ತದೆ. ಜೇನುತುಪ್ಪದ ಜೊತೆ ಶುಂಠಿ ರಸ ಸೇರಿಸಿ ಸೇವನೆ ಮಾಡುವುದು, ಶುಂಠಿ ಸೇರಿಸಿ ಕಷಾಯ ಮಾಡುವುದು ಅಥವಾ ಶುಂಠಿ ಟೀ ಮಾಡಿ ಕುಡಿಯುವುದರಿಂದಲೂ ಸಮಸ್ಯೆಗೆ ಉತ್ತಮ ಫಲ ಸಿಗುತ್ತದೆ.
ಇದನ್ನೂ ಓದಿ: Cashew Health Tips: ಗೋಡಂಬಿ ತಿಂದರೆ ಏನಾಗುತ್ತದೆ?
4. ಸಿಟ್ರಸ್ ಹಣ್ಣುಗಳು: ನಿಂಬೆಹಣ್ಣು, ಮುಸಂಬಿ ಹಾಗೂ ಕಿತ್ತಳೆ ಹಣ್ಣುಗಳಲ್ಲಿ ಹೇರಳವಾಗಿ ವಿಟಮಿನ್ ಸಿ ಇರುವುದರಿಂದ ಇವು ಕೂಡಾ ಶೀತ, ನೆಗಡಿ, ಕಫದಂತಹ ಸಮಸ್ಯೆಗಳಿಗೆ ನೆರವಾಗಬಲ್ಲುದು. ನ್ಯುಮೋನಿಯಾ ನಂತರಕ್ಕಿಂತ, ಇವನ್ನು ಮೊದಲೇ ನಮ್ಮ ಆಹಾರಗಳಲ್ಲಿ ಸೇವಿಸುವುದರಿಂದ ದೇಹಕ್ಕೆ ಮೊದಲೇ ವಿಟಮಿನ್ ಸಿ ಸರಿಯಾಗಿ ಲಭ್ಯವಾಗುವ ಮೂಲಕ ಇಂತಹ ಇನ್‌ಫೆಕ್ಷನ್‌ಗಳಿಂದ ಇವು ನಮ್ಮನ್ನು ದೂರ ಇರಿಸುವಲ್ಲಿ ನೆರವಾಗುತ್ತವೆ. ರೋಗನಿರೋಧಕ ಶಕ್ತಿಯನ್ನು ಇವು ಹೆಚ್ಚಿಸುವ ಮೂಲಕ ಇನ್‌ಫೆಕ್ಷನ್‌ಗಳಿಂದ ನಮ್ಮನ್ನು ದೂರವಿರಿಸುತ್ತವೆ.
5. ಬೀಜಗಳು: ಬಾದಾಮಿ, ಪಿಸ್ತಾ, ವಾಲ್‌ನಟ್‌ನಂತಹ ಬೀಜಗಳನ್ನು ಸೇವನೆ ಮಾಡುವ ಮೂಲಕವೂ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್ ಹಾಗೂ ಪೋಷಕಾಂಶಗಳನ್ನು ನೀಡುತ್ತಾ ರೋಗಗಳಿಂದ ರಕ್ಷಿಸಿಕೊಳ್ಳಬಹುದು.
ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!
ಆರೋಗ್ಯ
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!
ʻಮ್ಯಾಜಿಕ್ ಡ್ರಿಂಕ್ʼ ಎಳನೀರಿನಿಂದ ಲಾಭಗಳಿರುವಷ್ಟೇ, ತೊಂದರೆಗಳೂ ಇವೆ. ಅವು ಯಾವುವು, ಹೇಗೆ, ಅದನ್ನು ತಪ್ಪಿಸುವುದು ಹೇಗೆ (Health tips) ಎಂಬುದನ್ನು ಇಲ್ಲಿ ನೋಡೋಣ.
ಕಲ್ಪವೃಕ್ಷದಿಂದ ಬರುವ ಎಳನೀರು (Tender coconut) ಅಮೃತವೆಂದರೆ ತಪ್ಪಿಲ್ಲ ನಿಜ. ನಿಸರ್ಗದತ್ತವಾಗಿ ಲಭ್ಯವಿರುವ ಪೋಷಕಾಂಶಯುಕ್ತ (Nutrient rich) ಪಾನೀಯವಿದು. ನಮ್ಮ ದಾಹ ತಣಿಸುವ ಅಷ್ಟೇ ಅಲ್ಲದೆ, ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಖನಿಜ ಲವಣಗಳನ್ನು ಪೂರೈಸುವ ಈ ಪಾನೀಯ ನಿಜಕ್ಕೂ ನೈಸರ್ಗಿಕ ಅದ್ಭುತಗಳಲ್ಲಿ ಒಂದು. ಇದರಲ್ಲಿ, ರೋಗನಿರೋಧಕ ಶಕ್ತಿ (Immunity power) ನಮ್ಮನ್ನು ಹಲವು ರೋಗಗಳಿಂದ ರಕ್ಷಿಸುವುದಲ್ಲದೆ, ದೇಹಕ್ಕೆ ದಿಢೀರ್ ಶಕ್ತಿಯನ್ನೂ ಚೈತನ್ಯವನ್ನೂ ನೀಡುತ್ತದೆ. ಇಂತಹ ಎಳನೀರು ಅಮೃತವೆಂದು ಸಿಕ್ಕಾಪಟ್ಟೆ ಕುಡಿದರಾದೀತೇ ಹೇಳಿ? ಅಮೃತ ವಿಷವಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾದರೆ, ಬನ್ನಿ, ಈ ʻಮ್ಯಾಜಿಕ್ ಡ್ರಿಂಕ್ʼ ಎಳನೀರಿನಿಂದ ಲಾಭಗಳಿರುವಷ್ಟೇ, ತೊಂದರೆಗಳೂ ಇವೆ. ಅವು ಯಾವುವು, ಹೇಗೆ, ಅದನ್ನು ತಪ್ಪಿಸುವುದು ಹೇಗೆ (Health tips) ಎಂಬುದನ್ನು ಇಲ್ಲಿ ನೋಡೋಣ.
1. ಅತಿಯಾಗಿ ಎಳನೀರು ಕುಡಿಯುವುದರಿಂದ ನಮ್ಮ ಜೀರ್ಣಾಂಗವ್ಯೂಹಕ್ಕೆ ತೊಂದರೆಯಾಗುತ್ತದೆ. ಇದರಲ್ಲಿ ಲಾಕ್ಸೇಟಿವ್ ಗುಣಗಳೂ ಇರುವುದರಿಂದ ಅತಿಯಾಗಿ ಕುಡಿದ ತಕ್ಷಣ ಅಜೀರ್ಣವಾಗಿ ಭೇದಿ ಶುರುವಾಗಬಹುದು. ಅಷ್ಟೇ ಅಲ್ಲ, ದೇಹ ಅತಿಯಾಗಿ ತಂಪಾಗಿ ಮೊದಲೇ ಶೀತಪ್ರಕೃತಿಯ ದೇಹವಿರುವ ಮಂದಿಗಂತೂ ಇದು ಥಂಡಿಗೆ ತಿರುಗಬಹುದು. ಹೀಗಾಗಿ ಎಳನೀರು ಅತಿಯಾಗದಂತೆಯೂ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ.
2. ಅಥ್ಲೀಟ್‌ಗಳಿಗೂ ಎಳನೀರು ಒಳ್ಳೆಯದಲ್ಲ. ನೀರಿಗೆ ಬದಲಾಗಿ ಎಳನೀರು ಕುಡಿದು ಆಟೋಟಗಳ ಅಭ್ಯಾಸ ಒಳ್ಳೆಯದಲ್ಲ. ಅದರ ಬದಲು ಅವರಿಗೆ ಖಾಲಿ ನೀರೇ ಒಳ್ಳೆಯದು. ಇದು ನೈಸರ್ಗಿಕವಾಗಿ ಸಿಗುವ ಎಲೆಕ್ಟ್ರೋಲೈಟ್ ಆಗಿದ್ದರೂ, ಇದರಲ್ಲಿ ಸಾಕಷ್ಟು ಖನಿಜ ಲವಣಗಳಿದ್ದರೂ ಇದು ಯುವ ಅಥ್ಲೀಟ್‌ಗಳಿಗೆ ಯಾವಾಗಲೂ ಒಳ್ಳೆಯದಲ್ಲ. ಅತಿಯಾದ ವರ್ಕೌಟ್ ಹಾಗೂ ನಿರಂತರ ತರಬೇತಿಗಳಿದ್ದ ಸಂದರ್ಭ ಶಕ್ತಿಗಾಗಿ ಇವನ್ನು ಕುಡಿಯಬಹುದೇ ಹೊರತು, ಸಾಮಾನ್ಯ ನಿತ್ಯದ ತರಬೇತಿಗಳಿಗೆ ನಿತ್ಯವೂ ಎಳನೀರಿನ ಅಗತ್ಯವಿಲ್ಲ. ಅದರ ಬದಲಾಗಿ ನೀರನ್ನೇ ಕುಡಿಯುವುದು ಅತ್ಯುತ್ತಮ ಎನ್ನುತ್ತಾರೆ ತಜ್ಞರು.
3. ಎಳನೀರಿನ ಇನ್ನೊಂದು ಸಮಸ್ಯೆ ಎಂದರೆ, ಇದನ್ನು ಕುಡಿದರೆ, ಆಗಾಗ ವಾಶ್‌ರೂಂ ಹೋಗಬೇಕಾಗುತ್ತದೆ ಎಂಬುದು. ಇದರ ಡೈಯೂರೆಟಿಕ್ ಗುಣಗಳಿಂದಾಗಿ ಇದು ಸಾಮಾನ್ಯ ನೀರಿಗಿಂತ ಆಗಾಗ ಮೂತ್ರವಿಸರ್ಜನೆಯನ್ನು ಪ್ರೇರೇಪಿಸುತ್ತದೆ.
4. ಇದು ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದು ನಿಜವೇ ಆದರೂ, ಇದರಲ್ಲಿ ಹೇರಳವಾಗಿ ನೈಸರ್ಗಿಕ ಸಕ್ಕರೆಯ ಅಂಶವೂ ಇದೆ. ಹಣ್ಣುಗಳಿಗೆ ಹೋಲಿಸಿದರೆ, ಇದರಲ್ಲಿರುವ ಸಕ್ಕರೆಯ ಅಂಶ ಕಡಿಮೆಯಾದರೂ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟುಗಳೂ ಇವೆ. ಹಾಗಾಗಿ ಇದು ಸಹಜವಾಗಿಯೇ ಹೆಚ್ಚು ಕ್ಯಾಲರಿಯ ಪೇಯ. ಒಂದು ಕಪ್ ಎಳನೀರಿನಲ್ಲಿ ಸುಮಾರು 60 ಕ್ಯಾಲರಿಗಳಿರುವುದರಿಂದ ಹಾಗೂ ಇದರಲ್ಲಿ ಹೇರಳವಾಗಿ ಪೊಟಾಶಿಯಂ ಹಾಗೂ ಸೋಡಿಯಂ ಕೂಡಾ ಇರುವುದರಿಂದ, ಕ್ಯಾಲರಿಯ ಆಧಾರದಲ್ಲಿ ಆಹಾರ ತೆಗೆದುಕೊಳ್ಳುವ ಮಂದಿಗೆ ಇದು ವರವಾಗಲಾರದು. ಹಾಗೆ ಯೋಚಿಸುವ ಮಂದಿಗೆ ದಾಹ ಇಳಿಸಲು ನೀರೇ ಸೂಕ್ತ.
ಆದರೆ, ಇದರಲ್ಲಿರುವ ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇದು ಅಮೃತ ಎಂಬುದರಲ್ಲಿ ಅನುಮಾಣವಿಲ್ಲ. ಹಾಗಾಗಿ ನಿತ್ಯವೂ ಅಲ್ಲದಿದ್ದರೂ, ಆಗಾಗ ಹಿತಮಿತವಾಗಿ ಎಳನೀರಿನ ಸೇವನೆ ಮಾಡುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಆದರೆ, ಪೊಟಾಶಿಯಂ ಹಾಗೂ ಸೋಡಿಯಂ ಏರಿಳಿತದ ಸಮಸ್ಯೆಯಿರುವ ಮಂದಿ ಎಳನೀರು ಕುಡಿಯುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಇದನ್ನೂ ಓದಿ: Health Tips: ಚಹಾದ ಜೊತೆಗೆ ಈ ಬಗೆಯ ಆಹಾರಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಗೊತ್ತೇ?!
ಆರೋಗ್ಯ
World Alzheimer’s Day 2023 : ಮರೆವಿನ ಸಮಸ್ಯೆ ಕಾಡುವ ಮುನ್ನ ಈ ಸಂಗತಿಯನ್ನು ಮರೆಯಬೇಡಿ!
ಅಲ್‌ಜೈಮರ್ಸ್ ರೋಗ (World Alzheimer’s Day 2023) ಬಂದರೆ ಹಾಗಂತೆ, ಹೀಗಂತೆ ಎಂಬಂಥವು ಬಹಳಷ್ಟು ಹರಿದಾಡುತ್ತವೆ. ಸರಿಯಾದ ಅರಿವು ಮಾತ್ರವೇ ನಮ್ಮ ಇರವನ್ನು ಕಾಪಾಡಬಲ್ಲದು. ಮರೆಯುವುದು ಮಾಮೂಲು ಎಂದು ಕಡೆಗಣಿಸಬೇಡಿ. ನಮ್ಮ ಅಸ್ಮಿತೆಯ ಅರಿವನ್ನೇ ಅಳಿಸಿಹಾಕುವ ಈ ರೋಗವನ್ನು ಪ್ರಾರಂಭದಲ್ಲೇ ಗುರುತಿಸಿದರೆ ಚಿಕಿತ್ಸೆಗಳು ಲಭ್ಯ ಇವೆ.
ಇಂದು ವಿಶ್ವ ಅಲ್‌ಜೈಮರ್ಸ್ ದಿನ (World Alzheimer’s Day 2023). ಜಗತ್ತಿನಲ್ಲಿ ಕೋಟಿಗಟ್ಟಲೆ ಜನರನ್ನು ಬಲಿ ತೆಗೆದುಕೊಂಡು, ವರ್ಷಂಪ್ರತಿ ಇನ್ನೂ ಹೆಚ್ಚಿನ ಜನರನ್ನು ತನ್ನ ತೆಕ್ಕೆಗೆ ಬೀಳಿಸಿಕೊಳ್ಳುತ್ತಿರುವ ಈ ರೋಗದ ಕುರಿತಾದ ಅರಿವು ಮಾತ್ರವೇ ನಮ್ಮನ್ನು ಕಾಪಾಡಬಲ್ಲದು. ಅದರಲ್ಲೂ ಕೋವಿಡ್ ಮಹಾಮಾರಿಯ ಕೃಪೆಯಿಂದಾಗಿ, ಒಂಟಿತನ, ಖಿನ್ನತೆಗಳು ಕಳೆದ ಮೂರು ವರ್ಷಗಳಲ್ಲಿ ಇನ್ನೂ ಹೆಚ್ಚಿನ ಜನರನ್ನು, ಮತ್ತಷ್ಟು ವೇಗವಾಗಿ ಈ ರೋಗದತ್ತ ತಳ್ಳುತ್ತಿವೆ. ನಮ್ಮ ಆಪ್ತರಿಗೇ ಈ ಸಮಸ್ಯೆ ಇದ್ದರೂ ಗುರುತಿಸುವುದು ತಡವಾದರೆ, ರೋಗ ಉಲ್ಬಣಿಸುವುದನ್ನು ತಡೆಯಲು ದಾರಿ ಕಾಣದಾಗುತ್ತದೆ. ಹೌದು, ಚಿಕಿತ್ಸೆ ಇಲ್ಲದ ಈ ಮರೆವಿನ ರೋಗ ಮುಂದುವರಿಯುವುದನ್ನು ನಿಧಾನ ಮಾಡುವಷ್ಟು ಅನುಕೂಲ ನಮ್ಮ ವೈದ್ಯ ವಿಜ್ಞಾನಕ್ಕಿದೆ. ಹಾಗಾಗಿ ಈ ರೋಗದ ಸುತ್ತ ಹರಿಡಿರುವ ಹಲವು ಮಿಥ್ಯೆಗಳನ್ನು ಒಡೆಯಬೇಕಿದೆ.
ವಯಸ್ಸಾದವರಿಗಷ್ಟೇ ಈ ರೋಗ ಬರುತ್ತದೆ
ವಯಸ್ಸಾದವರಲ್ಲಿ ಮರೆವು ಹೊಸದಲ್ಲ, ನಿಜ. ಹಾಗೆಂದು ಭವವನ್ನೇ ಮರೆಯುವಂಥ ಸ್ಥಿತಿ ಬರಬಾರದಲ್ಲ. ವಯಸ್ಸಾದ ಮೇಲೆ ಈ ರೋಗದ ಚಿಹ್ನೆಗಳು ಹೆಚ್ಚಾಗಿ ಗೋಚರಿಸಬಹುದು. ಆದರೆ ಪ್ರಾರಂಭ 60 ವರ್ಷದೊಳಗೇ ಆಗಿರುವ ಸಾಧ್ಯತೆ ಇರುತ್ತದೆ. ಡೌನ್ಸ್ ಸಿಂಡ್ರೋಮ್ ಇರುವವರಲ್ಲಿ ೪೦ ವರ್ಷಕ್ಕೆ ಅಲ್‌ಜೈಮರ್ಸ್ ಪ್ರಾರಂಭವಾದ ಉದಾಹರಣೆಗಳಿವೆ.
ಅಲ್‌ಜೈಮರ್ಸ್, ಡಿಮೆನ್ಶಿಯಾ- ಎರಡೂ ಒಂದೇ ಅಲ್ಲ!:
ಹಲವು ರೀತಿಯ ಡಿಮೆನ್ಶಿಯಾಗಳಲ್ಲಿ ಅಲ್‌ಜೈಮರ್ಸ್ ಸಹ ಒಂದು. ಆದರೆ ಡಿಮೆನ್ಶಿಯಾ ಪ್ರಕರಣಗಳಲ್ಲಿ ಮುಕ್ಕಾಲುಪಾಲು ಪ್ರಕರಣಗಳು ಅಲ್‌ಜೈಮರ್ಸ್ ಆಗಿದ್ದು, ಮೊದಲಿಗೆ ಅಷ್ಟಾಗಿ ಕೇಳದ ಭಾರತದಲ್ಲಿಯೂ ಈ ರೋಗ ಸಿಕ್ಕಾಪಟ್ಟೆ ಹೆಚ್ಚುತ್ತಿದೆ.
ಈ ರೋಗ ಹೆತ್ತವರಿಗಿದ್ದರೆ ಮಕ್ಕಳಿಗೂ ಬರತ್ತದೆಯೆ?
ಹಾಗೇನಿಲ್ಲ. ತಂದೆ-ತಾಯಿಯರಲ್ಲಿ ಯಾರಿಗಾದರೂ ಇದ್ದರೆ ಮಕ್ಕಳಿಗೆ ಬಂದೇ ಬರುತ್ತದೆ ಎನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲ. ಹಾಗಂತ ಬರುವುದಿಲ್ಲ ಎನ್ನಲೂ ಸಾಧ್ಯವಿಲ್ಲ. ವಂಶವಾಹಿಗಳಿಗಿಂತ ಮುಖ್ಯವಾಗಿ ಜೀವನಶೈಲಿ ಮತ್ತು ಪಾರಿಸಾರಿಕ ವಿಷಯಗಳು ರೋಗಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದು ಸಾಬೀತಾಗಿದೆ. ಹಾಗಾಗಿ ಉತ್ತಮ ಆಹಾರ, ಜೀವನಶೈಲಿ, ಒಳ್ಳೆಯ ಸಾಮಾಜಿಕ ಸಂಬಂಧಗಳು ವ್ಯಕ್ತಿಗಳ ಮಾನಸಿಕ ಆರೋಗ್ಯವನ್ನು ಗಾಢವಾಗಿ ಪ್ರಭಾವಿಸುತ್ತವೆ
ಈ ರೋಗಕ್ಕೆ ಚಿಕಿತ್ಸೆಯೇ ಇಲ್ಲ
ಒಮ್ಮೆ ಪ್ರಾರಂಭವಾದ ಮೇಲೆ ಈ ರೋಗ ಗುಣವಾಗುವುದಿಲ್ಲ ಎನ್ನುವುದು ನಿಜ. ಆದರೆ ಮೊದಲಿಗಿಂತ ಬಹಳ ಮುಂದುವರಿದ ಪ್ರಮಾಣದಲ್ಲಿ ಚಿಕಿತ್ಸೆಗಳು ಲಭ್ಯವಿವೆ. ರೋಗ ಮುಂದುವರಿಯುವುದನ್ನು ನಿಧಾನ ಮಾಡುವ ಚಿಕಿತ್ಸೆಗಳು ಪ್ರಚಲಿತದಲ್ಲಿವೆ. ಉಳಿದಂತೆ, ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗಿಗಳ ಮತ್ತು ಅವರ ಆಪ್ತರ ಬದುಕುಗಳನ್ನು ಸಹನೀಯವಾಗಿಸಲು ಖಂಡಿತಾ ಸಾಧ್ಯವಿದೆ.
ಇತ್ತೀಚೆಗೆ ತುಂಬಾ ಮರೆವು, ನನಗೂ…?
ಮರೆಯುವವರಿಗೆಲ್ಲಾ ಈ ರೋಗವಿದೆ ಎನ್ನಲು ಸಾಧ್ಯವಿಲ್ಲ. ಮರೆವು ಸಾಮಾನ್ಯ ಸಂಗತಿ. ವಯಸ್ಸಾದವರಲ್ಲಿ ಇದು ಇನ್ನೂ ಮಾಮೂಲು. ಆದರೆ ಈ ಮರೆವಿನಿಂದ ಬದುಕು ಲಯ ತಪ್ಪುತ್ತಿದೆ ಎಂಬ ಭಾವ ಒಂದೆಳೆಯಷ್ಟು ಬಂದರೂ ವೈದ್ಯರನ್ನು ಭೇಟಿ ಮಾಡಿ. ಪ್ರಾರಂಭದಲ್ಲೇ ಈ ರೋಗವನ್ನು ಪತ್ತೆ ಹಚ್ಚುವುದು ಅಗತ್ಯ
ಅಲ್‌ಜೈಮರ್ಸ್ ಬಾರದಂತೆ ತಡೆಯಬಹುದು
ಇದನ್ನೂ ಓದಿ : Health Care | ತಾವರೆ ಬೀಜ ಅಥವಾ ಮಖನಾ ತಿನ್ನಲು ರುಚಿ ಮಾತ್ರವೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು
ಇದಕ್ಕೆ ಖಚಿತ ಪುರಾವೆಗಳಿಲ್ಲ. ಆದರೆ ಬದುಕಿನಲ್ಲಿನ ಕೆಲವು ಧನಾತ್ಮಕ ಬದಲಾವಣೆಗಳಿಂದ ನರಗಳು ಕ್ಷಯಿಸುತ್ತಾ ಹೋಗುವ ಈ ರೋಗ ಬರುವ ಸಾಧ್ಯತೆಗಳನ್ನು ಖಂಡಿತಾ ಕಡಿಮೆ ಮಾಡಬಹುದು. ಆರೋಗ್ಯಪೂರ್ಣ ಆಹಾರಕ್ರಮ ಮತ್ತು ಕ್ರಿಯಾಶೀಲವಾದ ಬದುಕನ್ನು ಅಪ್ಪಿಕೊಳ್ಳುವತ್ತ ಮುಖಮಾಡಿ. ಚಟಗಳನ್ನು ದೂರ ಮಾಡಿ, ಮಧುಮೇಹ, ಬಿಪಿ, ಕೊಲೆಸ್ಟ್ರಾಲ್ ಸಮಸ್ಯೆಗಳಿದ್ದರೆ ನಿಯಂತ್ರಣದಲ್ಲಿ ಇರಿಸಿ. ತೂಕ ಮಿತಿಯಲ್ಲಿರಲಿ. ಸಾಮಾಜಿಕ ಸಂಪರ್ಕಗಳನ್ನು ವೃದ್ಧಿಸಿಕೊಳ್ಳಿ. ಮೆದುಳಿಗೆ ರಚನಾತ್ಮಕ ಕೆಲಸ ಕೊಡಿ. ವಯಸ್ಸು ಎಷ್ಟಾದರೂ ಹೊಸದನ್ನು ಕಲಿಯಲು ಬೇಸರಿಸಬೇಡಿ. ಮನಸ್ಸು ಭಾರ ಮಾಡಿಕೊಳ್ಳದೆ ಮುಕ್ತವಾಗಿರಿ.
-
ಪ್ರಮುಖ ಸುದ್ದಿ12 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ3 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ9 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ23 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ22 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಗ್ಯಾಜೆಟ್ಸ್6 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಆರೋಗ್ಯ15 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!