ಕಾರವಾರ: ನೌಕಾನೆಲೆಗೆ ಗುತ್ತಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಮಳೆಯಿಂದ ಚಾಲಕ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆ ಪಕ್ಕದ ಕಾಲುವೆಗೆ ಬಸ್ (Road Accident) ಇಳಿದಿದೆ. ಈ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಸಂಕ್ರುಭಾಗ್ ಘಟ್ಟದಲ್ಲಿ ನಡೆದಿದೆ.
ಅಪಘಾತದಲ್ಲಿ ಚಾಲಕ ಬಡೇಸಾಬ್ ಮುಜಾವರ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ನೌಕಾನೆಲೆಗೆ 30ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಳೆಯಿಂದಾಗಿ ತಿರುವಿನಲ್ಲಿ ಬಸ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಹೆದ್ದಾರಿಯಿಂದ ಸ್ಕಿಡ್ ಆಗಿ ರಸ್ತೆಯ ಬಲಭಾಗಕ್ಕೆ ಬಸ್ ಇಳಿದ ಪರಿಣಾಮ ಬಸ್‌ನಲ್ಲಿದ್ದ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕಾರವಾರ ಬಸ್ ಡಿಪೋ ಮ್ಯಾನೇಜರ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಲುವೆಗೆ ಇಳಿದಿದ್ದ ಬಸ್ ಅನ್ನು ಮೇಲಕ್ಕೆ ಎತ್ತಿದ್ದಾರೆ.ಇನ್ನು ಎರಡು ದಿನಗಳ ಹಿಂದಷ್ಟೇ ಕಾರವಾರದ ಹಬ್ಬುವಾಡದಲ್ಲಿ ಕೆಎಸ್ಆರ್‌ಟಿಸಿ ಬಸ್‌ನ ಎಕ್ಸೆಲ್ ತುಂಡಾದ ಪರಿಣಾಮ 50ಕ್ಕೂ ಅಧಿಕ ಪ್ರಯಾಣಿಕರು ಅಪಾಯಕ್ಕೆ ಸಿಲುಕಿದ್ದರು.
ಇದನ್ನೂ ಓದಿ: Student Death : ಗುಂಡು ಹಾರಿಸಿಕೊಂಡು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
ನಿಯಂತ್ರಣ ತಪ್ಪಿ ಶೆಡ್‌ಗೆ ನುಗ್ಗಿದ ಟ್ರಕ್; ಐವರು ಕಾರ್ಮಿಕರು ಗಂಭೀರ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಶೆಡ್‌ಗೆ ಟ್ರಕ್ ನುಗ್ಗಿದೆ. ಲಾರಿ ಚಾಲಕ ಸೇರಿ ಏಳು ಮಂದಿಗೆ ಗಾಯಗೊಂಡಿದ್ದಾರೆ.
16 ಚಕ್ರದ ಲಾರಿಯು ಮಂಗಳೂರಿನಿಂದ ಅರುಣಾಚಲಂಗೆ ಸಿಮೆಂಟ್ ತುಂಬಿಕೊಂಡು ಬೆಂಗಳೂರಿನ ಕಡೆಗೆ ತೆರಳುತ್ತಿತ್ತು. ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಚಾಲಕನ ನಿಯಂತ್ರಣ ತಪ್ಪಿದೆ. ಇತ್ತ ಊಟ ಮುಗಿಸಿ ಶೆಡ್‌ನಲ್ಲಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಹರಿದಿದೆ. ಗಂಭೀರ ಗಾಯಗೊಂಡಿರುವ ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಪಘಾತದಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹೆದ್ದಾರಿಯಲ್ಲಿ ಟಿಟಿ ವಾಹನ ಪಲ್ಟಿ
ಬೆಂಗಳೂರು-ಹೊಸೂರು ಮುಖ್ಯರಸ್ತೆಯ ನೆರಳೂರು ಬಳಿ ಟಿಟಿ ವಾಹನವು ಪಲ್ಟಿಯಾಗಿದೆ. ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
12 ಮಂದಿ ಇದ್ದ ಟಿಟಿ ವಾಹನವು ಬೆಂಗಳೂರು ಕಡೆಯಿಂದ ಹೊಸೂರು ಮಾರ್ಗವಾಗಿ ಹೊರಟಿತ್ತು. ಹೆದ್ದಾರಿಯಲ್ಲಿ ಒಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ವಾಹನವು ಪಲ್ಟಿಯಾಗಿದೆ. ಹನ್ನೆರಡು ಮಂದಿ ಪ್ರಯಾಣಿಕರ ಪೈಕಿ ಮೂವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೆದ್ದಾರಿಯಲ್ಲಿ ಟಿಟಿ ವಾಹನ ಅಪಘಾತದಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ