Site icon Vistara News

Road Accident: ಕ್ಯಾಂಟರ್‌ ತಲೆ ಮೇಲೆ ಹರಿದು ಬೈಕ್‌ ಸವಾರರ ಸಾವು

Accident

ವಿಜಯಪುರ: ಕ್ಯಾಂಟರ್ ಮೈಮೇಲೆ ಹರಿದ ಪರಿಣಾಮ (road accident) ಇಬ್ಬರು ಬೈಕ್ ಸವಾರರು ಘೋರ ಸಾವಿಗೀಡಾಗಿದ್ದಾರೆ. ವಿಜಯಪುರ ನಗರದ ಎನ್‌ಫೀಲ್ಡ್ ಶೋರೂಂ ಬಳಿ ದುರ್ಘಟನೆ ನಡೆದಿದೆ.

ತಡರಾತ್ರಿ ನಡೆದ ಘಟನೆಯಲ್ಲಿ ಬೈಕ್ ಸವಾರರ ತಲೆ ಮೇಲೆ ಕ್ಯಾಂಟರ್ ಹರಿದಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್ ಓವರ್‌ಟೇಕ್ ಮಾಡಲು ಹೋಗಿ ಚಕ್ರಗಳ ಅಡಿಯಲ್ಲಿ ಬೈಕ್ ಸವಾರರು ಸಿಲುಕಿಕೊಂಡಿದ್ದಾರೆ. ತಲೆ ಅಪ್ಪಚ್ಚಿಯಾಗಿದ್ದು, ರಸ್ತೆ ತುಂಬಾ ಹರಡಿರುವ ಭೀಕರ ದೃಶ್ಯ ಕಂಡುಬಂದಿದೆ. ಬೈಕ್ ಸವಾರರು ಹಂಚಿನಾಳ ತಾಂಡಾದವರು ಎನ್ನಲಾಗಿದ್ದು, ಸಾವನ್ನಪ್ಪಿದವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ವಿದ್ಯಾರ್ಥಿಯ ಶವ ಪತ್ತೆ

ಮಡಿಕೇರಿ: ಕೊಡಗಿನಲ್ಲಿ ಹಾರಂಗಿ ನಾಲೆಯಲ್ಲಿ ಶಾಲಾ ಬಾಲಕ ಕಣ್ಮರೆಯಾದ ಪ್ರಕರಣದಲ್ಲಿ ವಿದ್ಯಾರ್ಥಿಯ ಶವ ಹಾರಂಗಿ ನಾಲೆಯಲ್ಲಿ ಪತ್ತೆಯಾಗಿದೆ. ಕಣ್ಮರೆಯಾಗಿದ್ದ‌ ಜಾಗದಿಂದ ನೂರು‌ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ.

ಕುಶಾಲನಗರ ತಾಲೂಕಿನ ಬ್ಯಾಡಗೊಟ್ಟ ಗ್ರಾಮದ ಅನಿತ್(14) ಮೃತ ವಿದ್ಯಾರ್ಥಿ. ಸದ್ಗುರು ಅಪ್ಪಯ್ಯಸ್ವಾಮಿ ಶಾಲೆಯ ವಿದ್ಯಾರ್ಥಿ ಅನಿತ್ ಶವ ಮಾದಲಾಪುರದಲ್ಲಿ ಪತ್ತೆಯಾಗಿದೆ. ನಿನ್ನೆ ಬೆಳಗ್ಗೆ 8.30ಕ್ಕೆ ದುರ್ಘಟನೆ ನಡೆದಿತ್ತು. ಏಡಿ ಹಿಡಿಯಲು ಮುಂದಾದ ಸಂದರ್ಭ ಬಾಲಕ ನೀರು ಪಾಲಾಗಿದ್ದ. ನಾಲೆಯಲ್ಲಿ ನೀರು ಸ್ಥಗಿತಗೊಳಿಸಿ ಶೋಧಕಾರ್ಯ ನಡೆಸಲಾಗಿತ್ತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪಘಾತದಲ್ಲಿ ಸಾವು, ನೇತ್ರದಾನ

ಧಾರವಾಡ: ಸೋಮವಾರ ನಡೆದ ಬೈಕ್ ಡಿಕ್ಕಿ ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿಯ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಧಾರವಾಡದ ತೇಜಸ್ವಿ ನಗರದಲ್ಲಿ ಘಟನೆ ನಡೆದಿತ್ತು. ಚನ್ನಬಸಪ್ಪ ಹಲ್ಲಲ್ಲಿ (35) ಮೃತ ವ್ಯಕ್ತಿಯಾಗಿದ್ದು, ಸಂಜೆ ತನ್ನ ಮಕ್ಕಳ ಜೊತೆ ಬೈಕ್‌ನಲ್ಲಿ ತೆರಳುವಾಗ ಎದುರಿಗೆ ಬಂದ ಬೈಕ್ ಡಿಕ್ಕಿ ಹೊಡೆದು ಸಾವು ಸಂಭವಿಸಿತ್ತು.

ಇಬ್ಬರ ಮಕ್ಕಳ ಜೀವ ಉಳಿಸಿ ಚನ್ನಬಸಪ್ಪ ಬೈಕ್ ಮೇಲಿಂದ ಬಿದ್ದಿದ್ದರು. ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದರು. ಸದ್ಯ ಎರಡು ಮಕ್ಕಳಿಗೆ ಎಸ್‌ಡಿಎಂ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Exit mobile version