ಚಿತ್ರದುರ್ಗ: ಚಿತ್ರದುರ್ಗದ ಮದಕರಿಪುರ ಬ್ರಿಡ್ಜ್ ಬಳಿ ಕಾರು ಹಾಗೂ ಟ್ಯಾಂಕರ್ ನಡುವೆ (Road Accident) ಡಿಕ್ಕಿಯಾಗಿದೆ. ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರ ಸಾವನ್ನಪ್ಪಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರು ಮೂಲದ ನಿರ್ಮಲ (55) ಹಾಗೂ ವಿನುತ (40), ಯಶಸ್ (2) ಮಗುವು ಮೃತಪಟ್ಟವರು.
ಬೆಂಗಳೂರು ಕಡೆಯಿಂದ ಹೊಸಪೇಟೆ ಕಡೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ಯಶಸ್ (02) ಮಾರ್ಗ ಮಧ್ಯೆ ಮೃತಪಟ್ಟಿದೆ. ಗಾಯಾಳು ಫಣಿರಾಜ (36) ಹಾಗೂ ರಶ್ಮಿ (32), ಕಾರು ಚಾಲಕನನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗದ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ:Peenya Flyover : ಲೋಡ್ ಟೆಸ್ಟಿಂಗ್ ಕಂಪ್ಲೀಟ್; ಪೀಣ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತ
ಹುಲ್ಲಿನ ಬಣವೆಗೆ ಬೆಂಕಿ ಹಾಕಿದ ಕಿಡಿಗೇಡಿಗಳು
ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮದಲ್ಲಿ ಜಂಬಯ್ಯ ಎಂಬುವವರ ಸೇರಿದ ಭತ್ತದ ಹುಲ್ಲಿನ ಬಣವೆಯು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಯಾರೋ ಕಿಡಿಗೇಡಿಗಳು ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಹಾಕಿದ್ದಾರೆ. ಹೀಗಾಗಿ ಸುಮಾರು 1.5 ಲಕ್ಷ ರೂ. ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇತ್ತ ಮಂಡ್ಯದ ಹಳೇ ಬೂದನೂರು ಗ್ರಾಮದಲ್ಲಿ ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿ ಭಸ್ಮವಾಗಿದೆ. ಗ್ರಾಮದ ರೈತ ಬಿ.ಎಸ್.ಮಧು ಎಂಬುವವರಿಗೆ ಸೇರಿದ ಹುಲ್ಲಿನ ಮೆದೆ ಸುಟ್ಟು ಕರಕಲಾಗಿದೆ. ಜಮೀನಿನ ಬಳಿಯೇ ಹುಲ್ಲಿನ ಮೆದೆ ಹಾಕಲಾಗಿತ್ತು. ಅಲ್ಲಿಂದ ಜಾನುವಾರುಗಳಿಗೆ ನಿತ್ಯವೂ ಮೇವು ತರುತ್ತಿದ್ದರು. ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸುಮಾರು ಒಂದೂವರೆ ಎಕರೆಯ ಹುಲ್ಲು ಒಂದು ಲಕ್ಷ ರೂ. ನಷ್ಟು ನಷ್ಟವಾಗಿದೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ನೊಂದ ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಕೂಟರ್‌ಗೆ ಬಸ್ ಡಿಕ್ಕಿ; ಪತ್ನಿ-ಮಗುವಿನ ಕಣ್ಣೇದುರಿಗೆ ನರಳಾಡಿ ಪ್ರಾಣಬಿಟ್ಟ ಪತಿ
ದೊಡ್ಡಬಳ್ಳಾಪುರ: ಸ್ಕೂಟರ್‌ನಲ್ಲಿ ಪತ್ನಿ- ಮಗುವನ್ನು ಕೂರಿಸಿಕೊಂಡು ಬರುವಾಗ ಹಿಂದಿನಿಂದ ಬಂದ ಖಾಸಗಿ ಬಸ್‌ವೊಂದು ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಮೂವರಲ್ಲಿ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಾರನ ಪತ್ನಿ-ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.
ಮೇಲಿನನಾಯಕರಂಡಹಳ್ಳಿ ನಿವಾಸಿ ಪ್ರಕಾಶ್ ನಾಯಕ (38) ಮೃತ ದುರ್ದೈವಿ. ಪ್ರಕಾಶ್ ತಮ್ಮ ಪತ್ನಿ ಹಾಗೂ ಮಗು ಜತೆಗೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪ್ರಕಾಶ್ ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಪ್ರಕಾಶ್ ನರಳಾಡಿ ಪತ್ನಿ, ಮಗುವಿನ ಎದುರೇ ಜೀವ ಬಿಟ್ಟಿದ್ದಾರೆ.
ಪ್ರಕಾಶ್ ಅವರ ಪತ್ನಿ-ಮಗು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮನೆಯ ಆಧಾರ ಸ್ತಂಭವನ್ನೇ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಅಪಘಾತದ ನಂತರ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಪಘಾತದಲ್ಲಿ ಪೀಸ್ ಪೀಸ್ ಆಗಿದ್ದ ಸ್ಕೂಟರ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ