ಶಿವಮೊಗ್ಗ: ಸೊರಬ ತಾಲೂಕಿನ ಉಳವಿ ಸಮೀಪ ಅಪಘಾತ (Road Accident) ಸಂಭವಿಸಿದ್ದು, ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಸುಹೇಲ್ (27), ಸಯ್ಯದ್ ಆಫ್ರಿದ್ ಅಲಿಯಾಸ್ ಪಿಂಟು (21) ಮೃತ ದುರ್ದೈವಿಗಳಾಗಿದ್ದಾರೆ.
ಸಾಗರದ ರಾಮನಗರದ ನಿವಾಸಿಗಳಾದ ಇಬ್ಬರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಮದುವೆಗೆಂದು ಉಳವಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ವ್ಯಾಗನರ್ ಕಾರು – ಬೈಕ್ ನಡುವೆ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಡಿಕ್ಕಿಯಾದ ರಭಸಕ್ಕೆ ಕೆಳಗೆ ಬಿದ್ದ ಇಬ್ಬರು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾಗರದ ಉಪವಿಭಾಗೀಯ ಆಸ್ಪತ್ರೆಯ ಶವಾಗಾರಕ್ಕೆ ಇಬ್ಬರ ಮೃತದೇಹವನ್ನು ರವಾನೆ ಮಾಡಲಾಗಿದೆ.
ಕಳವು ಮಾಡಲು ಶಾಲೆಗೆ ನುಗ್ಗಿದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಕಡಬ (ದಕ್ಷಿಣ ಕನ್ನಡ): ಧರ್ಮಸ್ಥಳ ಠಾಣಾ ವ್ಯಾಪ್ತಿಯ ಶಾಲೆಯೊಂದರಿಂದ ಇನ್ವರ್ಟರ್ ಮತ್ತು ಕಂಪ್ಯೂಟರ್ ಕದಿಯಲು ಯತ್ನಿಸುತ್ತಿದ್ದ ವೇಳೆ ಕಳ್ಳರನ್ನು ಅಲ್ಲಿನ ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಧರ್ಮಸ್ಥಳ ಸಮೀಪದ ಪೆರ್ಲ ಬೈಪಾಡಿ ಬಂದಾರಿನ ಸರಕಾರಿ ಪ್ರೌಢಶಾಲೆಗೆ ರಾತ್ರಿ 12 ಗಂಟೆ ಸುಮಾರಿಗೆ 4 ಜನ ಕಳ್ಳರು ನುಗ್ಗಿರುವುದನ್ನು ಗಮನಿಸಿ ಸ್ಥಳೀಯರು ಶಾಲಾ ವಠಾರದಲ್ಲಿ ಒಟ್ಟು ಸೇರಿ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನಲಾಗಿದೆ. ಕಳ್ಳರನ್ನು ಹಿಡಿದು ಎಳೆದೊಯ್ಯುತ್ತಿರುವ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ: Karnataka Election 2023: ಮತದಾನದ ದಿನ ‘ಜೈ ಬಜರಂಗಬಲಿ’ ಎನ್ನುತ್ತಾ ಕಮಲದ ಬಟನ್ ಒತ್ತಿ: ಪ್ರಧಾನಿ ನರೇಂದ್ರ ಮೋದಿ
ಈ ಕಳ್ಳರ ಗ್ಯಾಂಗ್ ಕಡಬ ಪರಿಸರದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಹಿಂದು ಸಂಘಟನೆಯೊಂದರಲ್ಲಿ ಸಕ್ರಿಯರಾಗಿದ್ದವರು ಎಂದು ಹೇಳಲಾಗುತ್ತಿದೆ. ಕಡಬ ಪರಿಸರದಲ್ಲಿ ಈ ಹಿಂದೆ ಹಲವು ಮನೆ ಕಳ್ಳತನ, ಟಯರ್ ಕಳ್ಳತನ, ಬೀದಿ ಬದಿ ಸೋಲಾರ್ ಬ್ಯಾಟರಿ ಕಳ್ಳತನ ನಡೆದಿದ್ದು ಈ ತಂಡವೇ ಕೃತ್ಯಗಳನ್ನು ಮಾಡಿರಬಹುದೆಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಪೊಲೀಸರ ಸೂಕ್ತ ತನಿಖೆಯಿಂದ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ.