ಆನೇಕಲ್/ಹಾಸನ: ಕಾರಿನ ಟೈರ್ ಸ್ಫೋಟಗೊಂಡು ಬ್ಯಾರಿಕೇಡ್ (Road Accident) ಗುದ್ದಿದೆ. ಪರಿಣಾಮ ಸಮೀಪವೇ ಕಸ ಗುಡಿಸುತ್ತಿದ್ದ ಟೋಲ್ ಸಿಬ್ಬಂದಿ ಮೇಲೆ ಬ್ಯಾರಿಕೇಡ್ ಬಿದ್ದಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೊಸೂರು ಮುಖ್ಯರಸ್ತೆಯ ಅತ್ತಿಬೆಲೆ ಟೋಲ್ ಬಳಿ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಮೂವರು ಟೋಲ್ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಬಂದಿದ್ದ ಅತ್ತಿಬೆಲೆ ಪೊಲೀಸರು ಪರಿಶೀಲಿಸಿದ್ದಾರೆ. ತಮಿಳುನಾಡು ಮೂಲದ ಕಾರು ಚಾಲಕ ಮೂರ್ತಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ.
ತ್ರಿಬಲ್ ರೈಡಿಂಗ್ ಜತೆಗೆ ವ್ಹೀಲಿಂಗ್
ಸಂಚಾರಿ ಪೊಲೀಸರು ಅದೆಷ್ಟೇ ವಾರ್ನಿಂಗ್ ಕೊಟ್ಟರೂ ಪುಂಡರ ಹುಚ್ಚಾಟ ಮಾತ್ರ ಕಡಿಮೆ ಆಗಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡಿ ಇತರೆ ವಾಹನ ಸವಾರರಿಗೆ ಕಾಟ ಕೊಡುತ್ತಿದ್ದಾರೆ. ಹಾಸನ- ಮೈಸೂರು ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಘಟನೆ ನಡೆದಿದೆ.
ಮೂರ್ನಾಲ್ಕು ಬೈಕ್‌ನಲ್ಲಿ ಒಟ್ಟೊಟ್ಟಿಗೆ ಬರುವ ಈ ಪುಂಡಾರು ತ್ರಿಬಲ್ ರೈಡಿಂಗ್ ಮಾಡುತ್ತಾ ಇಡೀ ರಸ್ತೆಯನ್ನು ಆವರಿಸಿಕೊಂಡು ತೊಂದರೆ ನೀಡುತ್ತಿದ್ದಾರೆ. ಯುವಕರ ಹುಚ್ಚಾಟದ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ನಿತ್ಯವೂ ಇಂತಹ ವ್ಹೀಲಿಂಗ್ ಪುಂಡರಿಂದ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.
ಸ್ವಲ್ಪ ಯಡವಟ್ಟಾದರೂ ಜೀವಕ್ಕೆ ಕುತ್ತು ಬರಲಿದೆ. ರಸ್ತೆಯಲ್ಲಿ ಇತರೆ ವಾಹನಗಳಿಗೂ ಸೈಡ್ ಕೂಡದೇ ವ್ಹೀಲಿಂಗ್ ಮಾಡುತ್ತಿದ್ದಾರೆ. ಇಂತಹ ಪುಂಡರಿಗೆ ಬ್ರೇಕ್ ಹಾಕುವಂತೆ ಸ್ಥಳೀಯರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ