Site icon Vistara News

Road Accident: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾಂಕ್ರಿಟ್‌ ಮಿಕ್ಸರ್ ಲಾರಿ; ಕಾರಿನಲ್ಲಿದ್ದ ತಾಯಿ-ಮಗಳು ದಾರುಣ ಸಾವು

#image_title

ಆನೇಕಲ್: ಇಲ್ಲಿನ ಬನ್ನೇರುಘಟ್ಟ ಸಮೀಪದ ಬ್ಯಾಲಮರದ ದೊಡ್ಡಿ ಬಳಿ ಕಾಂಕ್ರಿಟ್‌ ಮಿಕ್ಸರ್ ಲಾರಿಯೊಂದು ನಿಯಂತ್ರಣ ತಪ್ಪಿ, ಪಕ್ಕದಲ್ಲಿ ಹೋಗುತ್ತಿದ್ದ ಕಾರಿನ ಮೇಲೆ (Road Accident) ಮಗುಚಿ ಬಿದ್ದಿದ್ದು, ಕಾರಿನಲ್ಲಿದ್ದ ತಾಯಿ ಮಗಳು ಮೃತಪಟ್ಟಿದ್ದಾರೆ. ಐಟಿ ಉದ್ಯೋಗಿ ಗಾಯತ್ರಿ ಕುಮಾರ್(47), ಸಮತಾ ಕುಮಾರ್ (16) ಮೃತ ದುರ್ದೈವಿಗಳು.

Road Accident

ಗಾಯತ್ರಿ ತಮ್ಮ ಮಗಳನ್ನು ಬನ್ನೇರುಘಟ್ಟ ಸಮೀಪದ ಬಸವನಪುರ ಬಳಿ ಇರುವ ಶೇರ್ ವುಡ್ ಹೈ ಶಾಲೆಗೆ ಬಿಡಲು ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕನಕಪುರ ರಸ್ತೆ ಮಾರ್ಗವಾಗಿ ಬನ್ನೇರುಘಟ್ಟಕ್ಕೆ ಬರುತ್ತಿದ್ದ ಲಾರಿಯು ತಿರುವಿನಲ್ಲಿ ಅತಿವೇಗವಾಗಿ ಬಂದಿದೆ. ಮಿಕ್ಸರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯುತ್ತಿದ್ದಂತೆ ಸ್ವಿಫ್ಟ್ ಕಾರಿನ ಮೇಲೆ ಮಗುಚಿ ಬಿದ್ದಿದೆ. ಪರಿಣಾಮ ಗಂಭೀರ ಗಾಯಗೊಂಡ ತಾಯಿ, ಮಗಳು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Road Accident

ಮೃತರು ಬಳ್ಳಾರಿ ಮೂಲದವರಾಗಿದ್ದು, ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಇತ್ತ ಕಾರು ಅಪಘಾತವಾಗುತ್ತಿದ್ದಂತೆ ಗಾಯತ್ರಿ ಅವರು ಪತಿ ಸುನೀಲ್ ಕುಮಾರ್ ಮೊಬೈಲ್‌ಗೆ ಅಪಘಾತವಾಗಿದೆ ಎಂದು ಮೆಸೇಜ್ ಮಾಡಿದ್ದಾರೆ. ಮೆಸೇಜ್ ಕಂಡೊಡನೆ ಸ್ಥಳಕ್ಕೆ ಪತಿ ಧಾವಿಸಿದ್ದು, ಲಾರಿ ಕೆಳಗೆ ಸಿಲುಕಿರುವ ಕಾರು ತೆಗೆಯಲು ಹರಸಾಹಸಪಟ್ಟರು. ನಾಲ್ಕು ಕ್ರೇನ್, ಒಂದು ಜೆಸಿಬಿ ನೆರವಿನಿಂದ ತೆರವು ಮಾಡಲಾಗುತ್ತಿದ್ದು, ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ.

ಪ್ರತಿದಿನ ಮಗಳು ಸಮತಾ ಕುಮಾರ್‌ರನ್ನು ತಂದೆ ಸುನೀಲ್ ಕುಮಾರ್ ಅವರೇ ಡ್ರಾಪ್ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಗಾಯತ್ರಿ ಅವರಿಗೆ ಬುಧವಾರ ಕಚೇರಿಯಲ್ಲಿ ಮೀಟಿಂಗ್ ಇದ್ದ ಕಾರಣಕ್ಕೆ ಮಗಳನ್ನು ಶಾಲೆಗೆ ಬಿಟ್ಟು ಕಚೇರಿಗೆ ಹೊರಡುತ್ತೇನೆ ಎಂದು ಹೇಳಿ ಕಾರಿನಲ್ಲಿ ಹೊರಟಿದ್ದರು.

ಇದನ್ನೂ ಓದಿ: Road Accident: ಸ್ಕಿಡ್‌ ಆದ ಬೈಕ್‌- ಹಾರಿ ಹೋಯಿತು ಸವಾರನ ಪ್ರಾಣಪಕ್ಷಿ; ಪಿಕಪ್‌ ವಾಹನ ಡಿಕ್ಕಿಯಾಗಿ ಪಾದಚಾರಿ ಮೃತ್ಯು

ಕಾರಿನಲ್ಲಿ ಹೋಗುತ್ತಿದ್ದಾಗ ಕನಕಪುರ ರಸ್ತೆ ಮಾರ್ಗವಾಗಿ ಬನ್ನೇರುಘಟ್ಟಕ್ಕೆ ಬರುವ ವೇಳೆ, ಯಮಸ್ವರೂಪಿಯಾಗಿ ಬಂದ ಕಾಂಕ್ರಿಟ್ ಮಿಕ್ಸರ್ ಲಾರಿಯು ಕಾರಿನ ಮೇಲೆ ಪಲ್ಟಿಯಾಗಿದೆ. ಇದರಿಂದ ತೀವ್ರ ತಾಯಿ-ಮಗಳಿಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Exit mobile version