ಬೆಂಗಳೂರು: ಇಲ್ಲಿನ ಮೇಖ್ರಿ ಸರ್ಕಲ್ ಬಳಿ ರಸ್ತೆ ದಾಟುವಾಗ ಪಾದಚಾರಿಯೊಬ್ಬನ ಮೇಲೆ ಕಾರು ಹರಿದು ಆತ ಸ್ಥಳದಲ್ಲಿಯೇ (Road Accident) ಮೃತಪಟ್ಟಿದ್ದ. ಆದರೆ ಮೃತ ವ್ಯಕ್ತಿಯ ಗುರುತು ಮಾತ್ರ ಪತ್ತೆಯಾಗಿರಲಿಲ್ಲ. ಅಪಘಾತದಲ್ಲಿ ಹೆಣವಾಗಿ ಬಿದ್ದವನ ಗುರುತು ಪತ್ತೆಗೆ ಹೆಣಗಾಡುತ್ತಿದ್ದ ಪೊಲೀಸರಿಗೆ ನೆರವಾಗಿದ್ದು ಅದೊಂದು ಫೋಟೊ. ಈ ಫೋಟೊದಿಂದಲೇ ಗುರುತು ಪತ್ತೆ ಹಚ್ಚಲಾಗಿದೆ.
ಜ.26ರ ರಾತ್ರಿ ಸುಮಾರು ರಾತ್ರಿ 11.30ರ ಸಮಯ ಮೇಖ್ರಿ ಸರ್ಕಲ್ ಬಳಿ ವ್ಯಕ್ತಿಯೊಬ್ಬ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೆಂಜ್ ಕಾರೊಂದು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಆತ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದ. ಆತನ ಗುರುತು ಪತ್ತೆಗಾಗಿ ಯಾವುದೇ ಗುರುತಿನ ಚೀಟಿ ಆಗಲಿ, ಮೊಬೈಲ್ ಆಗಲಿ ಇರಲಿಲ್ಲ. ಆದರೆ ಹೆಣವಾಗಿ ಬಿದ್ದವನ ಪಕ್ಕದಲ್ಲಿದ್ದ ಫೋಟೊದಿಂದ ಮೃತನ ವಿಳಾಸವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರ್.ಟಿ ನಗರದ ಚೋಳನಾಯಕನಹಳ್ಳಿ ನಿವಾಸಿ ವೆಂಕಟೇಶ್ ಎಂದು ತಿಳಿದು ಬಂದಿದೆ.
ವೆಂಕಟೇಶ್ ತಂದೆಯ ಫೋಟೊ ಕೈಯಲ್ಲಿ ಹಿಡಿದುಕೊಂಡು ಮೇಖ್ರಿ ಸರ್ಕಲ್ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ಏರ್‌ಪೋರ್ಟ್ ರಸ್ತೆಯಲ್ಲಿ ಯಮಸ್ವರೂಪಿಯಾಗಿ ಬಂದ ಬೆಂಜ್ ಕಾರೊಂದು ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದರು. ಘಟನೆಯಲ್ಲಿ ಅಪರಿಚಿತ ವ್ಯಕ್ತಿ ರಸ್ತೆಯಲ್ಲಿ ಹೀಗೆ ದಾರುಣವಾಗಿ ಮೃತಪಟ್ಟಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸದಾಶಿವನಗರ ಸಂಚಾರಿ ಪೊಲೀಸರು ಎರಡು ವಿಶೇಷ ತಂಡವನ್ನು ರಚನೆ ಮಾಡಿದ್ದರು.
ಮನಕಲಕುವ ಕಥೆಗೆ ಖಾಕಿ ಕಣ್ಣೀರು
ಪೊಲೀಸರ ತನಿಖೆ ವೇಳೆ ಮನಕಲಕುವ ಕಥೆಯೊಂದು ಬೆಳಕಿಗೆ ಬಂದಿದೆ. ವೆಂಕಟೇಶ್ ಎಂದು ಗುರುತು ಪತ್ತೆಯಾಗಿದ್ದು ಆತನ ಬಳಿಯಿದ್ದ ತಂದೆಯ ಫೋಟೊ. ವೆಂಕಟೇಶ್‌ಗೆ ತನ್ನ ತಂದೆ ಎಂದರೆ ಎಲ್ಲಿಲ್ಲದ ಪ್ರೀತಿ, ಅಕ್ಕರೆ. ವೆಂಕಟೇಶ್ ಪಾಲಿಗೆ ತಂದೆಯೇ ಹೀರೋ ಆಗಿದ್ದರು. ಆದರೆ ಇತ್ತೀಚೆಗೆ ವೆಂಕಟೇಶ್ ತಂದೆ ಮೃತಪಟ್ಟಿದ್ದರು. ತಂದೆ ಅಗಲಿಕೆ ಬಳಿಕ ವೆಂಕಟೇಶ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರಂತೆ.
ವೆಂಕಟೇಶ್ ತನ್ನ ತಂದೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದೇ ಎಲ್ಲಿಗೆ ಹೋದರೂ ಕೈಯಲ್ಲಿ ಅಪ್ಪನ ಫೋಟೊ ಹಿಡಿದುಕೊಂಡು ಓಡಾಡುತ್ತಿದ್ದರಂತೆ. ಅದೇ ರೀತಿ ಕಳೆದ ಗುರುವಾರ ರಾತ್ರಿಯೂ ಕೂಡ, ವೆಂಕಟೇಶ್ ತನ್ನ ತಂದೆ ಫೋಟೊದೊಂದಿಗೆ ಮಲ್ಲೇಶ್ವರದ ತನ್ನ ಅಣ್ಣನ ಮನೆಗೆ ಹೋಗಿ ವಾಪಸ್ ಬರುತ್ತಿದ್ದರು. ಮೇಖ್ರಿ ಸರ್ಕಲ್ ಬಳಿ ಆಟೋ ಇಳಿದು ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ವೆಂಕಟೇಶ್ ಮೃತಪಟ್ಟಿದ್ದರು. ಆದರೆ ವೆಂಕಟೇಶ್ ಕೈಯಲ್ಲಿದ್ದ ಆತನ ತಂದೆಯ ಫೋಟೊ ಮೃತನ ಗುರುತು ಪತ್ತೆಹಚ್ಚಲು ನೆರವಾಗಿದೆ.
ಇದನ್ನೂ ಓದಿ: Auto Driver Arrest : ಬ್ಯಾಗ್ ನೋಡಿಕೊ, ಬರ್ತೇನೆ ಎಂದ ಪ್ರಯಾಣಿಕ; 1.5 ಲಕ್ಷ ರೂ. ಎಗರಿಸಿ ಪರಾರಿಯಾದ ರಿಕ್ಷಾ ಚಾಲಕ!
ಸದಾಶಿವನಗರ ಸಂಚಾರಿ ಪೊಲೀಸರು ಮೃತನ ಕುಟುಂಬದವರನ್ನು ಸಂಪರ್ಕಿಸಿ ವೆಂಕಟೇಶ್ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಅಪಘಾತ ಮಾಡಿ ನಾಪತ್ತೆಯಾದ ಬೆಂಜ್ ಕಾರು ಪತ್ತೆ ಹಚ್ಚಲು ಎರಡು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಹೆಬ್ಬಾಳ, ಮೇಖ್ರಿ ಸರ್ಕಲ್ ಸೇರಿ ಹಲವೆಡೆ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಪೊಲೀಸರು ಕಾರು ಪತ್ತೆ ಮಾಡುತ್ತಿದ್ದಾರೆ.