ವಿಜಯಪುರ: ಚಲಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡಿದ್ದು, ರಸ್ತೆ ಪಕ್ಕಕ್ಕೆ ಪಲ್ಟಿ (Road Accident) ಆಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಸಿಂದಗಿ ತಾಲೂಕಿನ ರಾಂಪುರ್ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.
ಕಾರಿನಲ್ಲಿದ್ದ ನಿಂಗಪ್ಪ ಕುಡಕಿ (75), ಪಾರ್ವತಿ ಕುಡಕಿ (60), ಸಿದ್ಧಾರೂಢ ಕುಡಕಿ (20) ಅಯ್ಯಪ್ಪ ಕುಡಕಿ (36) ಎಂಬುವವರು ಕಾರಿನಲ್ಲಿ ಬರುವಾಗ ಈ ದುರಂತ ನಡೆದಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದಾರೆ. ಕಾರಿನೊಳಗೆ ಸಿಲುಕಿ ನರಳಾಡುತ್ತಿದ್ದವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಯಂತ್ರಣ ತಪ್ಪಿ ಮನೆಯ ಮೇಲೆಯೇ ಉರುಳಿದ ಟ್ರ್ಯಾಕ್ಟರ್
ಚಿಕ್ಕಮಗಳೂರು: ಜಿಲ್ಲೆಯ ಬೆಟ್ಟದ ಭಾಗದಲ್ಲಿರುವ ಮನೆಗಳ ಮೇಲೆ ಕೆಲವೊಮ್ಮೆ ವಾಹನಗಳು ಉರುಳುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ ಸಾಮಾನ್ಯವಾಗಿದೆ. ರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಕೆಳಭಾಗದಲ್ಲಿರುವ ಮನೆಗಳ ಮೇಲೆ ಬೀಳುತ್ತವೆ. ಮಂಗಳವಾರವೂ ಶೃಂಗೇರಿ ತಾಲೂಕಿನ ಮಾರುತಿ ಬೆಟ್ಟ ಗ್ರಾಮದಲ್ಲಿ ಅಂತಹುದೇ ಒಂದು ಘಟನೆ ನಡೆದಿದೆ.
ಶೃಂಗೇರಿ ತಾಲೂಕಿನ ಮಾರುತಿ ಬೆಟ್ಟ ಗ್ರಾಮದ ತಿರುವಿನಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿಬಿದ್ದಿದೆ. ಟ್ರ್ಯಾಕ್ಟರ್ ಬಿದ್ದ ರಭಸಕ್ಕೆ ಕಿರಣ್ ಎಂಬವರ ಮನೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯ ವೇಳೆ ಮನೆಯಲ್ಲಿ ಕಿರಣ್ ಅವರ ಪತ್ನಿ ಮತ್ತು ಮಗು ಇದ್ದರು. ಪತ್ನಿ ಅಡುಗೆ ಮನೆಯಲ್ಲಿದ್ದರೆ ಪುಟ್ಟ ಮಗು ಅಲ್ಲೇ ಆಟವಾಡುತ್ತಿತ್ತು. ಟ್ರ್ಯಾಕ್ಟರ್ ಬಿದ್ದ ರಭಸಕ್ಕೆ ಅಡುಗೆ ಮನೆಯ ಭಾಗವೂ ಸ್ವಲ್ಪ ಜಖಂ ಆಗಿದೆ. ಆದರೆ, ಅದೃಷ್ಟಕ್ಕೆ ತಾಯಿ ಮತ್ತು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ. ಮನೆಯಲ್ಲಿದ್ದ ಪೀಠೋಪಕರಣ, ವಿದ್ಯುತ್ ಉಪಕರಣಗಳು ನಾಶವಾಗಿವೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Weather Report: 48 ಗಂಟೆಯಲ್ಲಿ ಈ 9 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಬೆಂಗಳೂರಲ್ಲಿ ಸಂಜೆ ಮಳೆ ಕಾಟ
ಕೊಪ್ಪಳದಲ್ಲಿ ಬೈಕ್‌ಗೆ ಕಾರು ಡಿಕ್ಕಿ, ಬೈಕ್ ಸವಾರ ಸಾವು
ಕೊಪ್ಪಳ: ಹಿಂಬದಿಯಿಂದ ಬೈಕ್‌ಗೆ ಕಾರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಬಳಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಹಲಗೇರಿಯ ಶಿವಪ್ಪ ಬಿನ್ನಾಳ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.