Site icon Vistara News

Road Accident in Bengaluru: ಅಪಘಾತಗಳ ನಗರಿ ಎಂಬ ಕುಖ್ಯಾತಿಗೆ ರಾಜಧಾನಿ ಗುರಿ; 3 ತಿಂಗಳಲ್ಲಿ 200ಕ್ಕೂ ಹೆಚ್ಚು ಮಂದಿ ಬಲಿ

Road Accident in Kanakagiri taluk

ಬೆಂಗಳೂರು: ರಾಜಧಾನಿ ಬೆಂಗಳೂರು ಎಂದರೆ ಟ್ರಾಫಿಕ್‌ ಸಿಟಿ (Traffic city) ಎಂಬ ಹಣೆಪಟ್ಟಿರುವ ಸಮಯದಲ್ಲಿ ಇದೀಗ ಆ್ಯಕ್ಸಿಡೆಂಟ್‌ ಸಿಟಿ (Accident city) ಎಂಬ ಕಳಂಕವನ್ನು ಹೊತ್ತುಕೊಂಡಿದೆ. ಬೆಂಗಳೂರು ಮಹಾ ನಗರದಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ. ಜತೆಯಲ್ಲೇ ಅಪಘಾತಗಳ (Road Accident) ಸಂಖ್ಯೆಯೂ ಹೆಚ್ಚಾಗುತ್ತಿದೆ.

2017ಕ್ಕೆ ಹೋಲಿಸಿದರೆ 2022ರಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಭೀಕರ ರಸ್ತೆ ಅಪಘಾತಗಳು ಸಂಭವಿಸಿರುವುದು ವರದಿ ಆಗಿದೆ. ಈ ವರ್ಷದ ಜನವರಿಯಲ್ಲಿ 29 ಜನ ಪಾದಚಾರಿಗಳು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ವರ್ಷದ ಆರಂಭದಿಂದ ಮಾರ್ಚ್‌ ಅಂತ್ಯದವರೆಗೂ ಸಿಟಿಯಲ್ಲಿ ಒಟ್ಟು 1,197 ರಸ್ತೆ ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 200 ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಚಾರಿ ವಿಶೇಷ ಪೊಲೀಸ್ ಆಯುಕ್ತ ಡಾ. ಎಂ.ಎ ಸಲೀಂ ಮಾಹಿತಿ ನೀಡಿದ್ದಾರೆ.

ಸಿಟಿಯಲ್ಲಿ ನಡೆದ ಅಪಘಾತಗಳ ಸಾವಿನ ಸಂಖ್ಯೆ ಹೀಗಿದೆ

ವರ್ಷ- ಸಾವಿನ ಸಂಖ್ಯೆ
• 2017 – 609
• 2018 – 661
• 2019 – 766
• 2020 – 622
• 2021- 618
• 2022 -777
• 2023 (3 ತಿಂಗಳು) – 205

ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಲ್ಲಿ 1,051 ಮಂದಿ ರಸ್ತೆ ಅಪಘಾತದಿಂದಾಗಿ ಗಾಯಗೊಂಡಿದ್ದಾರೆ. ಕಳೆದ 3 ತಿಂಗಳಲ್ಲಿ 300 ಮಾರಣಾಂತಿಕ ಹಾಗೂ 997 ಮಾರಣಾಂತಿಕವಲ್ಲದ ರಸ್ತೆ ಅಪಘಾತಗಳು ಬೆಂಗಳೂರಿನಲ್ಲಿ ಸಂಭವಿಸಿವೆ. ಅಲ್ಲದೆ ಬೆಂಗಳೂರಿನಲ್ಲಿ ಇರುವ ಕೆಟ್ಟ ರಸ್ತೆಗಳು, ಅತಿ ವೇಗದ ಚಾಲನೆ, ನಿರ್ಲಕ್ಷ್ಯದಿಂದ ವಾಹನ ಚಾಲನೆಯಿಂದ ಅಪಘಾತಗಳಿಗೆ ಕಾರಣವಾಗಿದೆ. ನಗರದಲ್ಲಿ 1.07 ಕೋಟಿ ವಾಹನಗಳಿದ್ದು, ಈ ವಾಹನಗಳ ಸಂಖ್ಯೆಗೆ ಹೋಲಿಸಿದರೆ ಸಾವುಗಳ ಸಂಖ್ಯೆ ಕಡಿಮೆಯಿದೆ ಎಂದು ವಿಶೇಷ ಪೊಲೀಸ್ ಆಯುಕ್ತ ಸಲೀಂ ಹೇಳಿದ್ದಾರೆ.

ಇದನ್ನೂ ಓದಿ: Karnataka BJP: ಕೇಂದ್ರ ಮಂತ್ರಿ ಮಾಡುತ್ತೇವೆಂದರೂ ಕೇಳದಿರುವುದು ಅಕ್ಷಮ್ಯ ಅಪರಾಧ: ಜಗದೀಶ್‌ ಶೆಟ್ಟರ್‌ ವಿರುದ್ಧ ಬಿ.ಎಸ್‌. ಯಡಿಯೂರಪ್ಪ ವಾಗ್ದಾಳಿ

ಬೆಂಗಳೂರಿನಲ್ಲಿ ನಿರ್ಲಕ್ಷ್ಯ ವಾಹನ ಚಾಲನೆ ಸಂಬಂಧ ಕಳೆದ ಮೂರು ತಿಂಗಳಲ್ಲಿ 660 ಕೇಸ್, ಅತಿ ವೇಗದ ವಾಹನ ಚಾಲನೆ ಸಂಬಂಧ 917 ಪ್ರಕರಣಗಳು ದಾಖಲಾಗಿವೆ. ಇನ್ನು ಸಿಗ್ನಲ್ ಜಂಪ್, ಲೇನ್ ಶಿಸ್ತು ಉಲ್ಲಂಘನೆ ಸಂಬಂಧ 2,32,626 ಪ್ರಕರಣಗಳು ದಾಖಲಾಗಿವೆ. ವಾಹನ ಸವಾರರ ಜತೆಗೆ ಪಾದಚಾರಿಗಳು ಕೂಡ ತಮ್ಮ ಎಚ್ಚರಿಕೆಯಲ್ಲಿ ಸಾಗಿದರೆ ಮುಂದಾಗುವ ಅನಾಹುತಗಳಿಗೆ ಬ್ರೇಕ್ ಹಾಕಬಹುದು.

Exit mobile version