ಚಿಕ್ಕಬಳ್ಳಾಪುರ: ಬೆಳ್ಳಂಬೆಳ್ಳಗ್ಗೆ ದಟ್ಟ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ಭೀಕರ ಅಪಘಾತ (road accident) ಸಂಭವಿಸಿದ್ದು, 13 ಮಂದಿ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ (chikkaballapur accident, chikkaballapur news) ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರಲ್ಲಿರುವ ಚಿತ್ರಾವತಿ ಬಳಿ ಘಟನೆ ನಡೆದಿದೆ. ರಸ್ತೆಯಲ್ಲಿ ನಿಂತಿದ್ದ ಸಿಮೆಂಟ್ ಕ್ಯಾಂಟರ್‌ಗೆ ವೇಗವಾಗಿ ಬಂದ ಟಾಟಾ ಸುಮೋ ಡಿಕ್ಕಿ ಹೊಡೆದಿದೆ. ಮುಂಜಾನೆ ಒಂದಡಿ ದೂರದ ರಸ್ತೆ ಕೂಡ ಕಾಣದಂತೆ ಮಂಜು ಹಬ್ಬಿದ್ದು, ಈ ಕಾರಣದಿಂದಲೇ ಸುಮೋ ಚಾಲಕನಿಗೆ ಕ್ಯಾಂಟರ್ ಕಾಣಿಸಿಲ್ಲ.
ಟಾಟಾ ಸುಮೋದಲ್ಲಿ 13 ಜನ ಪ್ರಯಾಣಿಸುತ್ತಿದ್ದರು. ಮೃತರೆಲ್ಲರೂ ಟಾಟಾ ಸುಮೋದಲ್ಲಿದ್ದವರಾಗಿದ್ದು, 6 ಮಂದಿ ಸ್ಥಳದಲ್ಲೇ ಅಸು ನೀಗಿದ್ದಾರೆ. ಇತರರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಸುಮೋ ಆಂಧ್ರಪ್ರದೇಶದಿಂದ ಬೆಂಗಳೂರಿನತ್ತ ಬರುತ್ತಿತ್ತು ಎಂದು ಗೊತ್ತಾಗಿದೆ. ಮೃತರ ವಿವರಗಳು ಇನ್ನೂ ಪತ್ತೆಯಾಗಿಲ್ಲ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಜು ಹಬ್ಬಿರುವಾಗ ವಾಹನ ಚಾಲನೆ ಮಾಡದಂತೆ ಟ್ರಾಫಿಕ್ ಪೊಲೀಸರ ಸೂಚನೆಯಿದ್ದರೂ ಹಲವರು ವೇಗವಾಗಿ ಚಲಾಯಿಸುವುದು, ಹೆದ್ದಾರಿಯಲ್ಲಿ ಹಝರ್ಡ್ ಲೈಟ್ ಮತ್ತಿತರ ಯಾವುದೇ ಸೂಚನೆಯಿಲ್ಲದೆ ಟ್ರಕ್‌ನಂಥ ದೊಡ್ಡ ವಾಹನಗಳನ್ನು ನಿಲ್ಲಿಸುವುದು ಇಂಥ ಅಪಘಾತಗಳಿಗೆ ಕಾರಣವಾಗಿದೆ.
ನೀರು ತರಲು ಹೋದ ಬಾಲಕಿ ಮುಳುಗಿ ಸಾವು
ಗದಗ: ನೀರು ತುಂಬಲು ಕೆರೆಗೆ ಹೋಗಿದ್ದ ಬಾಲಕಿ ಕಾಲು ಜಾರಿ ಮುಳುಗಿ ಸಾವಿಗೀಡಾದ ಘಟನೆ ಗದಗ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ. ಭುವನೇಶ್ವರಿ ಛಟ್ರಿ (12) ಮೃತ ಬಾಲಕಿ.
ಗ್ರಾಮ ಪಂಚಾಯಿತಿ ಮುಂದೆ ಬಾಲಕಿ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಘಟನೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯೇ ಕಾರಣ. ಕೆರೆ ಸುತ್ತ ಸಂಪೂರ್ಣವಾಗಿ ತಂತಿ ಬೇಲಿ ನಿರ್ಮಿಸಿಲ್ಲ. ಜೊತೆಗೆ ಮೆಟ್ಟಿಲು ನಿರ್ಮಾಣ ಮಾಡಿಲ್ಲ. ಹೀಗಾಗಿ ದುರ್ಘಟನೆಗೆ ಪಂಚಾಯಿತಿ ಸಿಬ್ಬಂದಿ ನೇರ ಹೊಣೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ನ್ಯಾಯ ಒದಗಿಸಬೇಕು. ಮೃತ ಬಾಲಕಿ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Road Accident: ದಸರಾ ಆನೆ ಹೊತ್ತು ಸಾಗುತ್ತಿದ್ದ ವಾಹನ ಹರಿದು ಚಾಲಕ ಸಾವು