ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಗೊಲ್ಲಿಹಳ್ಳಿ ಗ್ರಾಮದ ಬಳಿ ಬೈಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರಿಗೆ ಭಾರಿ ಪೆಟ್ಟಾಗಿತ್ತು. ಈ ವೇಳೆ ಇಬ್ಬರ ಕಾಲುಗಳು ತುಂಡಾಗಿ ರಸ್ತೆ ಮೇಲೆ ಬಿದ್ದಿವೆ. ಘಟನೆ ನಡೆದು ಒಂದು ಗಂಟೆಯಾದರೂ ಆಂಬ್ಯುಲೆನ್ಸ್ ಬಾರದಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಒಬ್ಬರು ಮೃತಪಟ್ಟಿದ್ದಾರೆ.
ಯಲ್ಲಪ್ಪ ವಣ್ಣೂರ, ಪಲ್ಲವಿ ವಣ್ಣೂರ, ಐಶ್ವರ್ಯ ವಣ್ಣೂರ ಭೀಮಪ್ಪ ವಣ್ಣೂರ ಗಂಭೀರವಾಗಿ ಗಾಯಗೊಂಡಿದ್ದರು. ಇವರಲ್ಲಿ ಒಬ್ಬ ಹೆಣ್ಣುಮಗಳ ಕಾಲು ಸಹ ತುಂಡಾಗಿದೆ. ಗಾಯಗೊಂಡು ಒಂದು ಗಂಟೆ ನರಳಾಡಿದರೂ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದಿರಲಿಲ್ಲ. ಕೊನೆಗೆ ತೀವ್ರವಾಗಿ ಗಾಯಗೊಂಡಿದ್ದ ಒಬ್ಬರನ್ನು ಕಾರಲ್ಲಿ ಕರೆದೊಯ್ಯಲಾಯಿತು.
ಒಂದು ಗಂಟೆ ತಡವಾಗಿ ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್
ಸ್ಥಳಕ್ಕೆ ಆಂಬ್ಯುಲೆನ್ಸ್ ಒಂದು ಗಂಟೆ ತಡವಾಗಿ ಬಂತು. ಕೂಡಲೇ ಉಳಿದ ಮೂವರು ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸ್ಥಳೀಯರು ಸಾಗಿಸಿದರು. ಬೈಕ್‌ನಲ್ಲಿದ್ದ ನಾಲ್ವರೂ ಗಂಭೀರವಾಗಿದ್ದು, ನಾಲ್ವರನ್ನೂ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಪಘಾತದಲ್ಲಿ ಗಾಯಗೊಂಡವರಲ್ಲಿ ಕಡತನಬಾಗೇವಾಡಿ ನಿವಾಸಿ ಯಲ್ಲಪ್ಪ ವಣ್ಣೂರ (25) ಮೃತಪಟ್ಟಿದ್ದಾರೆ. ಮೂವರಿಗೆ ಐಸಿಯುದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ: Jet crashes: ಚಾಮರಾಜನಗರದಲ್ಲಿ ಜೆಟ್ ಪತನ; ಪ್ಯಾರಾಚೂಟ್ ಮೂಲಕ ಪ್ರಾಣ ಉಳಿಸಿಕೊಂಡ ಇಬ್ಬರು ಪೈಲೆಟ್
ಶಿರಸಿಯಿಂದ ಬೆಳಗಾವಿಯತ್ತ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿತ್ತು. ಕರತನಬಾಗೇವಾಡಿ ಗ್ರಾಮದಿಂದ ಗಸ್ಟೊಳ್ಳಿ ಗ್ರಾಮಕ್ಕೆ ಬೈಕ್‌ನಲ್ಲಿ ಇವರೆಲ್ಲರೂ ಬರುತ್ತಿದ್ದರು. ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ನಂದಘಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಘಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.