Site icon Vistara News

Road accident : ರಸ್ತೆ ಕಾಮಗಾರಿ ಅವ್ಯವಸ್ಥೆ; ಮಣ್ಣಿನ ರಾಶಿಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತ್ಯು

Accident near Gangavati kills one

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಅಪೂರ್ಣ ರಸ್ತೆ ಕಾಮಗಾರಿಯ (Incomplete Road work) ಕಾರಣದಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road accident) ಯುವಕನೊಬ್ಬ ಮೃತಪಟ್ಟಿದ್ದಾರೆ. ರಮೇಶ್‌ (23) ಮೃತ ಯುವಕ.

ಈ ಭಾಗದಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿತ್ತು. ಆದರೆ, ಕಾಮಗಾರಿ ವೇಳೆ ರಸ್ತೆಯ ಮೇಲೆಯೇ ಮಣ್ಣು ಗುಡ್ಡೆ ಹಾಕಲಾಗಿತ್ತು. ರಮೇಶ (23) ಅವರು ಮಂಗಳವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಇದರ ಅರಿವಿಲ್ಲದೆ ಬೈಕ್‌ ಓಡಿಸಿದ್ದರಿಂದ ಮಣ್ಣಿನ ಮೇಲೆಯೇ ಹರಿದ ಬೈಕ್‌ ಪಲ್ಟಿಯಾಗಿ ಬಿದ್ದು ಪ್ರಾಣವೇ ಹಾರಿ ಹೋಗಿದೆ.

ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕನ ಸಾವು ಸಂಭವಿಸಿದೆ. ಇಲ್ಲಿ ಯಾವುದೇ ಸೂಚನಾ ಫಲಕ ಹಾಕದೇ ರಸ್ತೆ ಕಾಮಗಾರಿ ನಡೆಲಾಗಿತ್ತು. ರಸ್ತೆ ಮೇಲೆಯೇ ಹಾಕಿದ್ದ ಮಣ್ಣಿನ ಗುಡ್ಡೆಯ ಅರಿವೇ ಇಲ್ಲದೆ ರಮೇಶ್‌ ಬೈಕ್‌ ಓಡಿಸಿದ್ದರು. ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿಯ ನಿರ್ವಹಣೆ ನಡೆಸುತ್ತಿತ್ತು.

ವರ್ಷವಾದರೂ ಮುಗಿಯದ ಕಾಮಗಾರಿ: ಸಾರ್ವಜನಿಕರ ಆಕ್ರೋಶ

ಹೊಸಳ್ಳಿ ಗ್ರಾಮದಲ್ಲಿ ಈ ರಸ್ತೆ ಕಾಮಗಾರಿ ಆರಂಭವಾಗಿ ಒಂದು ವರ್ಷವೇ ಕಳೆದಿದೆ. ಆದರೆ, ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿ ಸಾಕಷ್ಟು ಅಪಘಾತಗಳು ನಡೆದಿವೆ. ರಾತ್ರಿ ಹೊತ್ತಿನಲ್ಲಂತೂ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಸಮಸ್ಯೆಗೆ ಸಾರ್ವಜನಿಕರ ಆಕ್ರೋಶ

ಇಲ್ಲಿ ರಸ್ತೆಯ ಮೇಲೆಯೇ ಮಣ್ಣು ರಾಶಿ ಹಾಕಲಾಗಿದೆ. ರಾತ್ರಿಯ ಹೊತ್ತು ಗೊತ್ತಿಲ್ಲದೆ ಪ್ರಯಾಣಿಸುವ ವಾಹನಿಗರು ಗೊತ್ತಿಲ್ಲದೆಯೇ ಬಂದು ಇದಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆಯುತ್ತಾರೆ. ಹೀಗೆ ನಡೆದ ಅಪಘಾತದಲ್ಲಿ ಈಗಾಗಲೇ ಹಲವಾರು ಮಂದಿ ಗಾಯಗೊಂಡಿದ್ದಾರೆ. ಆದರೆ, ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿಲ್ಲ. ಇದೀಗ ಸಾವು ಸಂಭವಿಸಿದ ಮೇಲೆ ಎಚ್ಚೆತ್ತಿದ್ದಾರೆ.

ಇಲ್ಲಿ ಯಾವುದೇ ರಸ್ತೆ ತಡೆಗಳನ್ನು ಹಾಕಿಲ್ಲ, ಎಚ್ಚರಿಕೆ ಫಲಕಗಳಿಲ್ಲ, ಬೀದಿ ದೀಪಗಳೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಕ್‌, KSRTC ಬಸ್‌ ಡಿಕ್ಕಿ; ಪರೀಕ್ಷೆ ಬರೆಯಲು ಹೋಗುತ್ತಿದ್ದ ವಿದ್ಯಾರ್ಥಿ ಸಾವು

ರಾಮನಗರ: ರಾಜ್ಯ ರಸ್ತೆ ಸಾರಿಗೆ ಬಸ್‌ (KSRTC BUS) ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ದುರಂತದಲ್ಲಿ (Road accident) ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ (Student death). ಬೈಕ್‌ನಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಮಾಗಡಿ ತಾಲೂಕಿನ ಜೋಡಗಟ್ಟೆ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಗಾಯಾಳು ವಿದ್ಯಾರ್ಥಿಯನ್ನು ದರ್ಶನ್‌ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಹಾರೋಹಳ್ಳಿಯಿಂದ ಐಟಿಐ ಪರೀಕ್ಷೆ ಬರೆಯಲು ಮಾಗಡಿಗೆ ಬರುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಗಡಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: DJ Halli Double Murder: ಡಬಲ್‌ ಮರ್ಡರ್‌ ಆರೋಪಿಯ ಸೈಕೋ ಅವತಾರ ಹೀಗಿದೆ ನೋಡಿ! ಈತನನ್ನು ಹಿಡಿದದ್ದು ಹೇಗೆ?

ಭಟ್ಕಳ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಪರಾರಿ, ಸವಾರ ಸಾವು

ಕಾರವಾರ: ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್‌ಗೆ ಎದುರಿನಿಂದ ಅಪರಿಚಿತ ಕಾರು ಡಿಕ್ಕಿಯಾದ (road accident) ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ. ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ (hit and run).

ಉತ್ತರಕನ್ನಡ ಜಿಲ್ಲೆಯ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಬಸ್ತಿ ಗ್ರಾಮದ ಬಳಿ ತಡರಾತ್ರಿ ಘಟನೆ (uttara kannada news) ನಡೆದಿದೆ. ಶಿವು ನಾಗೇಶ ನಾಯ್ಕ(28) ಮೃತ ದುರ್ದೈವಿ. ಎಂಜಿನಿಯರ್ ಆಗಿದ್ದ ಹೊನ್ನಾವರ ತಾಲ್ಲೂಕಿನ ಮಂಕಿ ಮೂಲದ ಶಿವು ಮಂಕಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ.

ಕಾಮಗಾರಿಗಾಗಿ ಬಂದ್ ಆಗಿರುವ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ತೆರಳುತ್ತಿದ್ದ ಬೈಕ್‌ ಸವಾರ ಶಿವುಗೆ ಹೆದ್ದಾರಿ ಡೈವರ್ಷನ್ ತಿಳಿಯದೇ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯಾಗಿ ನಿಲ್ಲಿಸದೆ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version