Site icon Vistara News

Road Accident : ಬ್ರೇಕ್ ಫೇಲ್ ಆಗಿ ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್‌; ಪ್ರಯಾಣಿಕರಿಗೆ ಗಾಯ

KSRTC bus falls into gorge after brake fails Passenger injured

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಂಗಡಹಳ್ಳ ಸಮೀಪದ ಮಂಕನಳ್ಳಿ ಬಳಿ ಭಾರಿ ಅನಾಹುತ ತಪ್ಪಿದೆ. ಕೆಎಸ್‌ಆರ್‌ಟಿಸಿ ಬಸ್‌ವೊಂದು (Ksrtc bus) ಬ್ರೇಕ್ ಫೇಲ್ (Break fail) ಆಗಿ ಕಂದಕಕ್ಕೆ ಉರುಳಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ 35 ಪ್ರಯಾಣಿಕರು ಪ್ರಾಣಾಪಾಯದಿಂದ (Road Accident) ಪಾರಾಗಿದ್ದಾರೆ.

ಅಪಘಾತದಲ್ಲಿ ನಾಲ್ವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ ಕಂದಕಕ್ಕೆ ಉರುಳುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಬಸ್‌ನೊಳಗೆ ಸಿಲುಕಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.

ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್‌

ದು:ಸ್ಥಿತಿಯಲ್ಲಿರುವ ಬಸ್ ಓಡಾಡಿಸುತ್ತಿರುವುದೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗುಜರಿ ಬಸ್ ನಿಲ್ಲಿಸಿ, ಸುಸ್ಥಿತಿಯ ಬಸ್ ಮಾರ್ಗ ನೀಡುವಂತೆ ಒತ್ತಾಯಿಸಿದ್ದಾರೆ. ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಠಾತ್ತಾಗಿ ಅಡ್ಡ ಬಂದ ನಾಯಿ; ಸ್ಕೂಟರ್‌ ಸಹಿತ ಉರುಳಿದ ಮಹಿಳೆ ಮೇಲೆ ಹರಿದ ಲಾರಿ!

ದೊಡ್ಡಬಳ್ಳಾಪುರ: ವಾಹನಗಳಿಗೆ ನಾಯಿಗಳು ಅಡ್ಡ ಬಂದು ಅಪಘಾತ ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ. ಹಠಾತ್ತಾಗಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದಾಗ ಮಹಿಳೆಯೊಬ್ಬರು ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದು. ಈ ವೇಳೆ ಅದೆ ಮಾರ್ಗವಾಗಿ ಬರುತ್ತಿದ್ದ ಲಾರಿಯು ಮಹಿಳೆಯ ಮೇಲೆ ಹರಿದಿದೆ. ಗಂಭೀರ ಗಾಯಗೊಂಡಿದ್ದ ಮಹಿಳೆ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಅಪಘಾತದ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು

ದೊಡ್ಡಬಳ್ಳಾಪುರ ಕೊಂಗಾಡಿಯಪ್ಪ ಕಾಲೇಜು ಬಳಿ ನಡೆದ ಅಪಘಾತದಲ್ಲಿ ನಂದಿನಿ (28) ಎಂಬಾಕೆ ಮೃತಪಟ್ಟಿದ್ದಾರೆ. ನಂದಿನಿ ತಮ್ಮ ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ನಾಯಿಯೊಂದು ದಿಢೀರ್‌ ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋದಾಗ ಸ್ಕೂಟರ್‌ ನಿಯಂತ್ರಣಕ್ಕೆ ಸಿಗದೆ ಉರುಳಿ ಬಿದ್ದಿದ್ದಾರೆ.

ಕುಟುಂಬಸ್ಥರ ಆಕ್ರಂದನ

ಅದೇ ಮಾರ್ಗದಲ್ಲಿ ಬರುತ್ತಿದ್ದ ಲಾರಿಯು ನಂದಿನಿ ಮೇಲೆ ಹರಿದು ಸ್ಕೂಟರ್‌ ಸಮೇತ ಎಳೆದುಕೊಂಡು ಹೋಗಿದೆ. ಅದೃಷ್ಟವಶಾತ್ ಮಗು ಪವಾಡ ಸದೃಶ್ಯದಂತೆ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ನಂದಿನಿ ತಲೆಗೆ ಗಂಭೀರ ಗಾಯವಾಗಿದ್ದರಿಂದ ಕೂಡಲೇ ಸ್ಥಳೀಯರು ದೊಡ್ಡಬಳ್ಳಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ನಂದಿನಿ ಮೃತಪಟ್ಟಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆಸ್ಪತ್ರೆ ಮುಂಭಾಗ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version