ಬೆಂಗಳೂರು ಗ್ರಾಮಾಂತರ: ಇಲ್ಲಿನ ದೊಡ್ಡಬಳ್ಳಾಪುರ ತಾಲೂಕಿನ ಗೌರಿಬಿದನೂರು ರಸ್ತೆ ಮಾಕಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ (Road Accident) ಪಲ್ಟಿಯಾಗಿದೆ. ಬೆಂಗಳೂರಿನಿಂದ ಹಿಂದೂಪುರಕ್ಕೆ ತೆರಳುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ಮಗುಚಿ ಬಿದ್ದಿದೆ.
ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದಾಗ, ಮಾಕಳಿ ಸಮೀಪ ಚಾಲಕ ತಿರುವು ತೆಗೆದುಕೊಳ್ಳುತ್ತಿದ್ದಾಗ ನಿಯಂತ್ರಣ ಸಿಗದೆ ಒಮ್ಮೆ ಪಲ್ಟಿ ಹೊಡೆದಿದೆ. ಪ್ರಯಾಣಿಕರೆಲ್ಲರೂ ಬಸ್ ಪಲ್ಟಿ ಆಗುತ್ತಿದ್ದಂತೆ ಭಯಗೊಂಡಿದ್ದಾರೆ. ಪಲ್ಟಿಯಾದ ಪರಿಣಾಮ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕೂಡಲೇ ಸ್ಥಳೀಯರ ನೆರವಿನಿಂದ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಲ್ಟಿ ಹೊಡೆದ ಬಸ್ ಅನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.
ಎರಡು ಲಾರಿಗಳ ಮುಖಾಮುಖಿ ಡಿಕ್ಕಿ; 1 ಸಾವು, ಮೂವರಿಗೆ ಗಾಯ
ಕಲಬುರಗಿ: ಎರಡು ಲಾರಿಗಳು ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಒಬ್ಬ ಚಾಲಕ ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ಸಂಭವಿಸಿದೆ. ಜಿಲ್ಲೆಯ ಕಮಲಾಪುರ ಪಟ್ಟಣದ ಹೊರವಲಯದಲ್ಲಿ ಭಾನುವಾರ ಘಟನೆ ನಡೆದಿದೆ.
ರಾಜಸ್ಥಾನ ಮೂಲದ ಚಾಲಕ ಅಬ್ಬಾಸ್ (39) ಮೃತ ದುದೈವಿಯಾಗಿದ್ದಾರೆ. ಹುಮನಾಬಾದ್ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಲಾರಿ ಹಾಗೂ ಜೇವರ್ಗಿಯಿಂದ ಹುಮನಾಬಾದ್ ಕಡೆ ತೆರಳುತ್ತಿದ್ದ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು.
ಮುಖಾಮುಖಿ ಡಿಕ್ಕಿಯಿಂದ ಲಾರಿಗಳ ಮುಂಭಾಗ ಛಿದ್ರವಾಗಿದೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.