ಬೆಂಗಳೂರು: ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಸಾವು-ನೋವಿಗೆ ಕಾರಣವಾಗಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ಬಳಿ ಬಸ್ ಹತ್ತಲು ಹೋಗಿ ಆಯ ತಪ್ಪಿ ದಂಪತಿ ಕೆಳಗೆ ಬಿದ್ದಿದ್ದಾರೆ. ಪತ್ನಿ ಗಂಭೀರ ಗಾಯಗೊಂಡಿದ್ದರೆ, ಪತಿ ದುರ್ಮರಣ ಹೊಂದಿದ್ದಾರೆ. ಉಮೇಶ್ ಮೃತ ದುರ್ದೈವಿ. ಶಿವಮ್ಮ (38) ಗಂಭೀರ ಗಾಯಗೊಂಡವರು.
ಉಮೇಶ್, ಶಿವಮ್ಮ ದಂಪತಿ ಮಾಗಡಿಗೆ ಹೋಗಲು ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಆ ಮಾರ್ಗವಾಗಿ ಹೋಗುವ ಖಾಸಗಿ ಬಸ್ ಬಂದಾಗ ಹತ್ತಲು ಹೋಗಿದ್ದಾರೆ. ಈ ವೇಳೆ ಬಸ್ ಮುಂದಕ್ಕೆ ಚಲಿಸಿದ್ದು ಇಬ್ಬರು ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡಿದ್ದವರನ್ನು ಸ್ಥಳೀಯರು ಕೂಡಲೇ ಉಮೇಶ್ ಹಾಗೂ ಶಿವಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಉಮೇಶ್ ಮೃತಪಟ್ಟಿದ್ದರೆ, ಶಿವಮ್ಮರಿಗೆ ಚಿಕಿತ್ಸೆ ಮುಂದುವರಿದಿದೆ.
ಬುಧವಾರ ಸಂಜೆ (ಜೂ.7) ಈ ಘಟನೆ ನಡೆದಿದ್ದು, ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್ ಚಾಲಕ ಗಂಗಾರಾಜು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಕಿಕ್ ಏರಿಸಿಕೊಂಡವರಿಂದ ಭೀಕರ ಅಪಘಾತ
ಮದ್ಯದ ನಶೆಯಲ್ಲಿದ್ದ ಯುವಕರಿಂದ ಭೀಕರ ಅಪಘಾತ ಸಂಭವಿಸಿದೆ. ಪಬ್‌ನಲ್ಲಿ ಪಾರ್ಟಿ ಮುಗಿಸಿ ಸ್ಕೋಡಾ ಕಾರಲ್ಲಿ ಅತೀ ವೇಗವಾಗಿ ಬಂದ ನಾಲ್ವರು, ಮೊದಲು ಆಟೋಗೆ ಡಿಕ್ಕಿ ಹೊಡೆದಿದ್ದರೆ, ನಂತರ ಮುಂದೆ ಇದ್ದ ಡಸ್ಟರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಡಸ್ಟರ್ ಕಾರು ಮಗುಚಿ ಬಿದ್ದಿದೆ. ಇನ್ನು ಡಸ್ಟರ್ ಕಾರಿನಲ್ಲಿ ಲಿಖಿತ್ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಸ್ಕೋಡಾ ಕಾರಿನಲ್ಲಿದ್ದ ಯುವಕರು ಮದ್ಯದ ನಶೆಯಲ್ಲಿ ಚೇಸಿಂಗ್ ಮಾಡಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ವೇಗಾಸಿಟಿ ಕಡೆಯಿಂದ ಜೆಪಿ ನಗರ ಮೆಟ್ರೋ ಬಳಿ ಬರುತ್ತಿದ್ದಂತೆ ಡಸ್ಟರ್ ಕಾರನ್ನು ಚೇಸ್ ಮಾಡಲು ಹೋಗಿ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಈ ಸಂಬಂಧ ಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮದುವೆಗೆಂದು ಹೋಗುತ್ತಿದ್ದಾಗ ಬಸ್ ಪಲ್ಟಿ
ಮದುವೆಗೆಂದು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಧುಗಿರಿ ತಾಲೂಕಿನ ಐಡಿಹಳ್ಳಿ ಗ್ರಾಮದಿಂದ ಶ್ರೀ ಕ್ಷೇತ್ರ ಘಾಟಿ ಸಮೀಪ ನಡೆದಿದೆ.
ಇದನ್ನೂ ಓದಿ: Lok Sabha Election 2024: ನನಗೆ ರಾಜಕಾರಣ ಸಾಕಾಗಿದೆ; ಮತ್ತೆ ಸ್ಪರ್ಧಿಸೋದು ಡೌಟೆಂದ ಡಿ.ಕೆ. ಸುರೇಶ್
ಅಪಘಾತ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮುಗುಚಿ ಬಿದ್ದಿದೆ. ಹನುಮಕ್ಕ(65), ಲಕ್ಷ್ಮೀದೇವಮ್ಮ (55),ಹನುಮಯ್ಯ(71) ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಇನ್ನೂ ಉಳಿದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಯಾಣಿಕರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಬೈಕ್‌ಗಳ ಮುಖಾಮುಖಿ ಡಿಕ್ಕಿ
ಶಿವಮೊಗ್ಗದ ಸಾಗರ ತಾಲೂಕಿನ ಕಾನ್ಲೆಯಲ್ಲಿ ಬೈಕ್‌ಗಳ ನಡುವೆ ಅಪಘಾತ ನಡೆದಿದೆ. ಅಪಘಾತದಲ್ಲಿ ಸ್ಥಳದಲ್ಲೇ ಸವಾರ ಉಸಿರು ಚೆಲ್ಲಿದ್ದರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಶಿರಸಿ ಕಸ್ತೂರಬಾ ನಗರ ನಿವಾಸಿ ಮಣಿ ಮೃತ ದುರ್ದೈವಿ. ಮಂಜುನಾಥ್ ಗಂಭೀರ ಗಾಯಗೊಂಡಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೊಬ್ಬ ಬೈಕ್ ಸವಾರ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ