ಶಿವಮೊಗ್ಗ: ಸಾಗರ ತಾಲೂಕಿನ ಅಂಬಲಿಗೊಳ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ (Road Accident) ಹೊಡೆದಿದೆ. ಈ ವೇಳೆ ಸ್ಥಳದಲ್ಲೇ ಚಾಲಕ ಮೃತಪಟ್ಟಿದ್ದರೆ, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ.
ಹೊಸನಗರ ತಾಲೂಕಿನ ಕೋಡೂರು ಸಮೀಪದ ತುರುಗೋಡು ಗ್ರಾಮದ ನಿವಾಸಿ ನಾಗರಾಜ್ ಗೌಡ (55) ಮೃತ ದುರ್ದೈವಿಯಾಗಿದ್ದಾರೆ. ಇವರು ಕಾಂಗ್ರೆಸ್ ಮುಖಂಡರಾಗಿದ್ದಾರೆ.
ಕೆಲಸದ ನಿಮಿತ್ತ ಶಿಕಾರಿಪುರಕ್ಕೆ ಹೋಗಿದ್ದ ಅವರು ಸ್ವಗ್ರಾಮಕ್ಕೆ ವಾಪಸ್ ಬರುತ್ತಿದ್ದಾಗ ಅವಘಡ ಸಂಭವಿಸಿದೆ.
ಮೃತರು ಹೊಸನಗರ ತಾಲೂಕಿನ ಮುಂಬಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ಮುಂಬಾರು ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರಿನಲ್ಲಿ ಮೂರು ಜನರಿದ್ದು, ಓರ್ವನಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಲಾಯಿಸುತ್ತಿದ್ದ ನಾಗರಾಜ ಗೌಡ ಅವರಿಗೆ ವೇಗವಾಗಿದ್ದ ಕಾರಣ ನಿಯಂತ್ರಣ ಸಿಗಲಿಲ್ಲ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗೇ ಆಗ್ತಾನೆ; ಇಲ್ಲದಿದ್ದರೆ ಮೀಸೆ ಬೋಳಿಸ್ತೀನಿ ಅಂದ ಮೀಸೆಯೇ ಇಲ್ಲದ 3 ವರ್ಷದ ಬಾಲಕ!
ಕಾಲೇಜು ವಿದ್ಯಾರ್ಥಿನಿ ನಾಪತ್ತೆಗೆ ಟ್ವಿಸ್ಟ್; ಕ್ರೈಸ್ತ ಸನ್ಯಾಸಿನಿ ಆಗಲು ಹೊರಟಿದ್ದ ಯುವತಿ!
ಶಿವಮೊಗ್ಗದ ನಂಜಪ್ಪ ಕಾಲೇಜಿನ ವಿದ್ಯಾರ್ಥಿನಿ ರಂಜಿತಾ (20) ನಿಗೂಢವಾಗಿ ನಾಪತ್ತೆಯಾಗಿ (Missing Case), ಆಕೆಯ ತಂದೆಗೆ 20 ಲಕ್ಷ ರೂ. ಹಫ್ತಾ ಬೇಡಿಕೆ ಬಂದಿದ್ದ ಪ್ರಕರಣಕ್ಕೆ ರೋಚಕ ತಿರುವು ದೊರೆತಿದೆ. ಯುವತಿಯನ್ನು ಹುಬ್ಬಳ್ಳಿಯಲ್ಲಿ ಪತ್ತೆ ಮಾಡಲಾಗಿದ್ದು, ಇದೆಲ್ಲವೂ ಅವಳೇ ಸೃಷ್ಟಿಸಿದ ಕಟ್ಟು ಕಥೆ ಎಂಬುದು ಬಯಲಾಗಿದೆ. ಜತೆಗೆ ಇದರ ಹಿಂದಿರುವ ಒಂದು ಮತಾಂತರದ ಜಾಲವೂ (Conversion racket) ತೆರೆದುಕೊಂಡಿದೆ.
ಶಿವಮೊಗ್ಗದ ನಂಜಪ್ಪ ಕಾಲೇಜಿನಲ್ಲಿ ಫಿಸಿಯೋ ಥೆರಪಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ (20) ನಿಗೂಢವಾಗಿ ನಾಪತ್ತೆಯಾಗಿದ್ದಳು. ಅದಾದ ಬಳಿಕ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಮೂಲದ ಈ ಯುವತಿಯ ತಂದೆ ಬಸವರಾಜ್ ಅವರಿಗೆ ಎಸ್‌ಎಂಎಸ್ ಸಂದೇಶವೊಂದು ಬಂದಿತ್ತು. ಅದರಲ್ಲಿ 20 ಲಕ್ಷ ರೂ. ನೀಡದಿದ್ದರೆ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು.
ಆತಂಕಗೊಂಡ ಬಸವರಾಜ್ ಅವರು ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಶಿವಮೊಗ್ಗ ಪೊಲೀಸರು ತೀವ್ರ ಹುಡುಕಾಟ ನಡೆಸಿ ಆಕೆಯನ್ನು ಹುಬ್ಬಳ್ಳಿಯಲ್ಲಿ ಪತ್ತೆ ಹಚ್ಚಿ ಶಿವಮೊಗ್ಗಕ್ಕೆ ಕರೆತಂದಿದ್ದು, ಪಾಲಕರ ವಶಕ್ಕೆ ಒಪ್ಪಿಸಿದ್ದರು.
ಇದನ್ನೂ ಓದಿ: Ramanath Rai: ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ರಮಾನಾಥ ರೈ; ಕೊಟ್ಟ ಮಾತಿನಂತೆ ನಡೆದ ಮಾಜಿ ಸಚಿವ
ದೂರು ನೀಡುವ ವೇಳೆ ರಂಜಿತಾ ಬಗ್ಗೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದ ಶಿವಮೊಗ್ಗದ ಜಯನಗರ ಪೊಲೀಸರು ಆಕೆಯ ಬಗ್ಗೆ ಎಲ್ಲ ಕಡೆ ಜಾಲಾಡಿದ್ದರು. ರಂಜಿತಾಳ ಮೊಬೈಲ್ ಟ್ರ್ಯಾಕಿಂಗ್ ಹಾಕಿದ ಪೊಲೀಸರು, ಆಕೆಯ ಬ್ಯಾಂಕ್ ವ್ಯವಹಾರಗಳ ಮೇಲೂ ಕಣ್ಣಿಟ್ಟಿದ್ದರು. ಆಕೆ ಎಟಿಎಂನಿಂದ 5000 ರೂ. ವಿತ್ ಡ್ರಾ ಮಾಡಿದ್ದನ್ನು ಗಮನಿಸಿ, ಬೆನ್ನಟ್ಟಿದಾಗ ಆಕೆ ಹುಬ್ಬಳ್ಳಿಯಲ್ಲಿ ಇರುವುದು ಸ್ಪಷ್ಟವಾಯಿತು.
ಹುಬ್ಬಳ್ಳಿಯಲ್ಲಿ ರಂಜಿತಾಳನ್ನು ವಶಕ್ಕೆ ಪಡೆದ ಪೊಲೀಸರು ಶಿವಮೊಗ್ಗಕ್ಕೆ ಕರೆ ತಂದು ವಿಚಾರಣೆ ನಡೆಸಿದಾಗ ಹಲವು ರೋಚಕ ಅಂಶಗಳು ಬೆಳಕಿಗೆ ಬಂದವು. ಅಪಹರಣ ಪ್ರಕರಣಕ್ಕೆ ಯುವತಿ ಹೇಳಿಕೆ ತಿರುವು ಕೊಟ್ಟಿತು.
ಸನ್ಯಾಸಿನಿಯಾಗಲು ಹೊರಟಿದ್ದ ರಂಜಿತಾ
ರಂಜಿತಾಳ ಮೇಲೆ ಶಾಲೆಯಲ್ಲಿರುವಾಗಲೇ ಕ್ರಿಶ್ಚಿಯನ್ ಸನ್ಯಾಸಿನಿಯರ ಪ್ರಭಾವ ಆಗಿತ್ತು ಎನ್ನಲಾಗಿದೆ. ಶಿವಮೊಗ್ಗದಲ್ಲಿ ಕೇರಳದ ಕ್ರಿಶ್ಚಿಯನ್ ವಿದ್ಯಾರ್ಥಿನಿಯರ ಪರಿಚಯವಾದ ಬಳಿಕ ಅದು ಇನ್ನಷ್ಟು ಗಾಢವಾಗಿತ್ತು. ಇದೀಗ ಆಕೆ ಮುಂಬೈನ ಕ್ಯಾಥೊಲಿಕ್ ಚರ್ಚ್‌ಗೆ ಹೊರಟಿದ್ದಳು ಎನ್ನಲಾಗಿದೆ. ಆಕೆಗೆ ಕ್ರಿಶ್ಚಿಯನ್ ಸನ್ಯಾಸಿನಿಯಾಗುವ ಆಸೆ ಇದ್ದು, ಅದನ್ನು ಪೂರೈಸಿಕೊಳ್ಳಲು ಆಕೆ ಅಲ್ಲಿಗೆ ಹೊರಟಿದ್ದಳು!
ಮೇ 14ರಂದು ಶಿವಮೊಗ್ಗದ ಹಾಸ್ಟೆಲ್‌ನಿಂದ ಹೊರಟಿದ್ದ ರಂಜಿತಾ ಶಿವಮೊಗ್ಗದಿಂದ ಮುಂಬೈಗೆ ಟಿಕೆಟ್ ಬುಕಿಂಗ್ ಮಾಡಲು ಯತ್ನಿಸಿದ್ದಳು. ಆದರೆ, ಸಿಕ್ಕಿರಲಿಲ್ಲ. ಬಳಿಕ ತೀರ್ಥಹಳ್ಳಿಯಿಂದ ಶೃಂಗೇರಿ ಮೂಲಕ ಹುಬ್ಬಳ್ಳಿಗೆ ತೆರಳಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: HD Devegowda: ದೇವೇಗೌಡರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ, ಅವರನ್ನು ಲೋಕಸಭೆಗೆ ನಿಲ್ಲಿಸುತ್ತೇವೆ: ಎಚ್.ಡಿ. ರೇವಣ್ಣ
ಮುಂಬಯಿಗೆ ಹೋದ ಮೇಲೆ, ಅಲ್ಲಿ ವಾಸ ಮಾಡಲು ಹಣ ಬೇಕು ಎಂಬ ಕಾರಣಕ್ಕಾಗಿ ರಂಜಿತಾ ಅಪಹರಣದ ಕಥೆ ಸೃಷ್ಟಿ ಮಾಡಿದ್ದಳು. 20 ಲಕ್ಷ ರೂ. ಒತ್ತೆ ಹಣಕ್ಕೆ ಬೇಡಿಕೆ ಇಡುವ ಮೆಸೇಜನ್ನು ತಂದೆಗೆ ತಾನೇ ಕಳಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ ರಂಜಿತಾ. ಈ ನಡುವೆ, ರಂಜಿತಾಳ ಹಿಂದೆ ಯಾರಾದರೂ ಇದ್ದಾರಾ, ಇದೊಂದು ಮತಾಂತರ ಜಾಲದ ಕುಮ್ಮಕ್ಕಿನ ಕೃತ್ಯವೇ ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.