ಕಾರವಾರ: ಖರ್ಜೂರ ಹಾಗೂ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಗಳೆರಡು ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಪಲ್ಟಿಯಾದ (Road accident) ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಸುಂಕಸಾಳ ಬಳಿ ನಡೆದಿದೆ. ಲಾರಿಗಳ ಅಪಘಾತದಿಂದಾಗಿ ಎರಡೂ ಲಾರಿಗಳ ಚಾಲಕ ಹಾಗೂ ಕ್ಲೀನರ್‌ಗಳಿಗೆ ಗಾಯಗಳಾಗಿದ್ದು, ಕಲ್ಲಿದ್ದಲು ಹಾಗೂ ಒಣ ಖರ್ಜೂರ ಹೆದ್ದಾರಿ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಕಲ್ಲಿದ್ದಲು ತುಂಬಿದ್ದ ಲಾರಿ ಅಂಕೋಲಾ ಕಡೆಯಿಂದ ಯಲ್ಲಾಪುರ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತಿತ್ತು. ಖರ್ಜೂರ ತುಂಬಿದ್ದ ಲಾರಿ ಮುಂಬೈನಿಂದ ಅಂಕೋಲಾ ಮಾರ್ಗವಾಗಿ ಕೊಚ್ಚಿ ಕಡೆಗೆ ಸಾಗುತ್ತಿತ್ತು. ಅಂಕೋಲಾದಿಂದ ತೆರಳುತ್ತಿದ್ದ ಕಲ್ಲಿದ್ದಲು ಲಾರಿ ವೇಗವಾಗಿ ಬಂದ ಪರಿಣಾಮ ನಿಯಂತ್ರಣ ತಪ್ಪಿದ್ದು ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ವಿದ್ಯುತ್ ಗಂಬಕ್ಕೆ ಗುದ್ದಿ ಹೆದ್ದಾರಿ ಮೇಲೆ ಪಲ್ಟಿಯಾಗಿದೆ.
ಇನ್ನೊಂದೆಡೆ ಎದುರಿನಿಂದ ವೇಗವಾಗಿ ಬಂದ ಲಾರಿ ತಪ್ಪಿಸಲು ಹೋಗಿ ಖರ್ಜೂರ ತುಂಬಿದ್ದ ಲಾರಿ ರಸ್ತೆ ಪಕ್ಕದ ಕಾಲುವೆಗೆ ಇಳಿದು ಪಲ್ಟಿಯಾಗಿದೆ. ಅಪಘಾತದಿಂದ ಕಲ್ಲಿದ್ದಲು ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಹರಸಾಹಸಪಟ್ಟು ಹೊರಕ್ಕೆ ತೆಗೆದಿದ್ದು ಗಾಯಾಳುಗಳನ್ನು ಅಂಕೋಲಾ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಹೈವೇ ಪೆಟ್ರೋಲಿಂಗ್ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೇ ಪಲ್ಟಿಯಾದ ಲಾರಿಗಳನ್ನು ಎರಡು ಕ್ರೇನ್ ಬಳಸಿ ಮೇಲೆತ್ತಿ ಹೆದ್ದಾರಿ ಅಂಚಿಗೆ ಸರಿಸಲಾಗಿದೆ. ಸಿಪಿಐ ಸಂತೋಷ ಶೆಟ್ಟಿ ಸ್ಥಳ ಪರಿಶೀಲಿಸಿದ್ದು, ಪಿಎಸೈ ಗಳಾದ ಪ್ರವೀಣ ಕುಮಾರ, ಪ್ರೇಮನಗೌಡ ಪಾಟಿಲ್ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ | Road Accident : ಬೈಕ್ ಸ್ಕಿಡ್ ಆಗಿ ಬಿಜೆಪಿ ಪ್ರಚಾರ ವಾಹನಕ್ಕೆ ಡಿಕ್ಕಿ; ಸವಾರ ಸಾವು