ಬೆಂಗಳೂರು: ಬೈಕ್ ಮತ್ತು ಕೆಎಸ್ಸಾರ್ಟಿಸಿ ನಡುವೆ ಭೀಕರ ರಸ್ತೆ ಅಪಘಾತ (Road accident) ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗೇಟ್ ಬಳಿ ಘಟನೆ ನಡೆದಿದ್ದು, ಬೈರದೇನಹಳ್ಳಿ ನಿವಾಸಿ ರಮೇಶ್ ಮೃತಪಟ್ಟವರು.
ರಮೇಶ್ ಅವರು ಹೂವಿನ ಕೃಷಿಕರಾಗಿದ್ದು, ಹೂವು ತೆಗೆದುಕೊಂಡು ಮಾರುಕಟ್ಟೆಗೆ ತೆರಳುತ್ತಿದ್ದಾಗ ಬಸ್ ಡಿಕ್ಕಿ ಹೊಡೆದಿದೆ. ಇಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲಿ ಒಂದೇ ಬದಿಯಲ್ಲಿ ಎರಡೂ ವಾಹನಗಳು ಎದುರುಬದುರು ವೇಗವಾಗಿ ಬಂದ ಕಾರಣ ದುರ್ಘಟನೆ ಸಂಭವಿಸಿದೆ.
ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ನೆಲಮಂಗಲ ಬಳಿ ಬೈಕ್‌ಗೆ ಲಾರಿ ಡಿಕ್ಕಿ; ಜೊಮ್ಯಾಟೊ ಡೆಲಿವರಿ ಬಾಯ್ ಸಾವು
ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 75ರ ಬಿಲ್ಲಿನಕೋಟೆ ಬಳಿ ನಡೆದ ಅಪಘಾತದಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬಿಲ್ಲಿನಕೋಟೆಯಲ್ಲಿ ಬೈಕ್‌ಗೆ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಮಲ್ಲೇಶ್ ಬಿ (24) ಮೃತಪಟ್ಟಿದ್ದಾರೆ.
ಬುಧವಾರ ಸಂಜೆ ಈ ಅಪಘಾತ ನಡೆದಿದ್ದು, ಗಾಯಗೊಂಡ ಯುವಕನನ್ನು ನಾಲ್ಕಾರು ಆಸ್ಪತ್ರೆಗೆ ಕರೆದೊಯ್ದರೂ ಕೊನೆಗೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮಲ್ಲೇಶ್ ಅವರನ್ನು ಮೊದಲು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಅಲ್ಲಿಂದ ನೆಲಮಂಗಲ ಖಾಸಗಿ ಆಸ್ಪತ್ರೆ, ವಿಕ್ಟೋರಿಯಾ, ನಿಮ್ಹಾನ್ಸ್ ಮಾತ್ರವಲ್ಲ, ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಪ್ರಾಣ ಉಳಿಯಲಿಲ್ಲ. ಕೊನೆಗೆ ಖಾಸಗಿ ಆಸ್ಪತ್ರೆಯಲ್ಲಿ ಯುವಕ ಕೊನೆಯುಸಿರೆಳೆದರು. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ: ಸವಾರ ಸಾವು
ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಪ್ರಾಣ ಕಳೆದುಕೊಂಡ ಘಟನೆ ಯಲಹಂಕ ತಾಲೂಕಿನ ಸಾದಹಳ್ಳಿ ಗೇಟ್ ಬಳಿ ನಡೆದಿದೆ. ಉತ್ತನಹಳ್ಳಿ ಗ್ರಾಮದ ಬಸವರಾಜ್ (40) ಮೃತರು/
ಸಾದಹಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಬಸವರಾಜು ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಬಸವರಾಜು ತಲೆಗೆ ತೀವ್ರ ಪೆಟ್ಟಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅವರು ಉಸಿರು ಕಳೆದುಕೊಂಡರು.
ಅಪಘಾತ ಕುರಿತು ಚಿಕ್ಕ ಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.