ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮಾಸ್ತಿಕಟ್ಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road accident) ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಪಿಕಪ್ ವಾಹನಕ್ಕೆ ಟಿಪ್ಪರ್ ಡಿಕ್ಕಿ (Pickup and tipper accident) ಹೊಡೆದು ಅಪಘಾತ ಸಂಭವಿಸಿದೆ.
ಮಾಸ್ತಿಕಟ್ಟೆ ಬಳಿ ಈ ಎರಡೂ ವಾಹನಗಳು ಡಿಕ್ಕಿ ಹೊಡೆದುಕೊಂಡಿದ್ದು, ಪಿಕಪ್‌ನಲ್ಲಿದ್ದ ರಾಜು ಗೌಡ (46) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಿಕಪ್ ವಾಹನದ ಚಾಲಕ ಶಿವರಾಜ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಪೋಲಿಸರು ಭೇಟಿ ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಲಾರಿ: ಟ್ರಾಫಿಕ್ ಜಾಮ್
ಚಿಕ್ಕಮಗಳೂರು: ಚಿಕ್ಕಮಗಳೂರಿನಿಂದ ದಕ್ಷಿಣ ಕನ್ನಡವನ್ನು ಜೋಡಿಸುವ ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ರಾತ್ರಿ ಲಾರಿಯೊಂದು ಕೆಟ್ಟು ನಿಂತು ಸಂಚಾರಕ್ಕೆ ಅಡಚಣೆಯಾಯಿತು.
ಟೊಮ್ಯಾಟೊ ತುಂಬಿದ್ದ ಲಾರಿಯೊಂದು ಘಾಟ್‌ನ 6ನೇ ತಿರುವಿನಲ್ಲಿ ಕೆಟ್ಟು ನಿಂತಿದ್ದು, ವಾಹನಗಳು ಪಾಸ್ ಆಗದೆ ರಾತ್ರಿಯಿಡೀ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡಿದರು. ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅದರ ಜತೆಗೆ ತುಂತುರು ಮಳೆ ಕೂಡಾ ಬರುತ್ತಿತ್ತು. ಇದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು.
ಇದನ್ನೂ ಓದಿ: Peacock Attack : ಎಲ್ಲ ಆಯ್ತು ಈಗ ನವಿಲು ದಾಳಿ; ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅಟ್ಯಾಕ್
ಬಸ್ ಕಂಡಕ್ಟರ್ ಡಿಪೋದಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಹಾವೇರಿ: ಸಾರಿಗೆ ಇಲಾಖೆಯ ಕಂಡಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲನಗೌಡ ಬಡಗೇರ ಎಂಬ 48 ವರ್ಷದ ಕಂಡಕ್ಟರ್ ರಾಣೆಬೆನ್ನೂರು ಬಸ್ ಡಿಪೋದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಣೆಬೇನ್ನೂರು ನಗರದ ಹೊರ ಹೊಲಯದಲ್ಲಿರುವ NWKRTC ಬಸ್ ಡಿಪೋದಲ್ಲಿ ಈ ಘಟನೆ ನಡೆದಿದ್ದು, ಅವರ ಕೃತ್ಯಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಹಲಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣವೇ ಅಥವಾ ಬೇರೇನಾದರೂ ಸಮಸ್ಯೆ ಇದೆಯೇ ಎಂದು ಇನ್ನಷ್ಟೇ ತಿಳಿದುಬಂದಿದೆ.