Site icon Vistara News

Road Accident | ಅಪಘಾತದಲ್ಲಿ ನವ ವಿವಾಹಿತ ಸಾವು; ಸ್ಟ್ರೆಚರ್‌ನಲ್ಲಿ ಬಂದು ಮೃತ ಪತಿಯ ಕೆನ್ನೆ ಸವರಿ ಬಿಕ್ಕಿ ಬಿಕ್ಕಿ ಅತ್ತ ಪತ್ನಿ

ರಸ್ತೆ ಅಪಘಾತ ನವ ವಿವಾಹಿತ ಸಾವು ದಾವಣಗೆರೆ ಹಾವೇರಿ

ದಾವಣಗೆರೆ: ಇದೊಂದು ಮನಕಲಕುವ ಅಪಘಾತ (Road Accident) ಪ್ರಕರಣವಾಗಿದೆ. ಮದುವೆಯಾಗಿ ೧೫ ದಿನಕ್ಕೆ ಬೈಕ್‌ನಲ್ಲಿ ಜಾಲಿ ಟ್ರಿಪ್‌ ಹೋಗಿದ್ದ ನವದಂಪತಿ ಬಾಳಿನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ರಸ್ತೆ ಬದಿ ನಿಂತಿದ್ದ ಕಬ್ಬಿನ ಗಾಡಿಗೆ ಬೈಕ್‌ ಡಿಕ್ಕಿ ಹೊಡೆದಿದ್ದು, ಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಪತ್ನಿಯು ತನ್ನ ನೋವಿನಲ್ಲೂ ಮೃತ ಪತಿಯ ಕೆನ್ನೆ ಸವರುತ್ತಾ ಕಣ್ಣೀರಿಟ್ಟಿದ್ದಾಳೆ. ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ, ಎಚ್ಚರವಾಗುತ್ತದೆಯೇ ಎಂದು ಪ್ರಯತ್ನ ಪಟ್ಟಿದ್ದಾಳೆ. ಆದರೆ, ಪತಿ ಮಾತ್ರ ಬಾರದ ಲೋಕಕ್ಕೆ ಹೋಗಿರುವುದು ಆಕೆಯನ್ನು ಮತ್ತಷ್ಟು ಜರ್ಜರಿತಳನ್ನಾಗಿ ಮಾಡಿದೆ. ಇದು ಅಲ್ಲಿದ್ದವರಲ್ಲೂ ಕಣ್ಣೀರು ತರಿಸಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಬಳಿ ಅಪಘಾತ ಸಂಭವಿಸಿದೆ. ದಾವಣಗೆರೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಸಂಜಯ್ (28) ಮೃತ ದುರ್ದೈವಿ. ಅವರ ಪತ್ನಿ ಪ್ರೀತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ಭಾನುವಾರ (ಡಿ.೧೧) ರಾತ್ರಿ ಅಪಘಾತವಾಗಿತ್ತು. ಸಂಜಯ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಪ್ರೀತಿಯ ಕೈ-ಕಾಲುಗಳಿಗೆ ಗಂಭೀರವಾಗಿ ಏಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಪತಿ ಸಂಜಯ್‌ ಮೃತದೇಹದ ಕೆನ್ನೆ ಸವರುತ್ತಿರುವ ಪತ್ನಿ ಪ್ರೀತಿ

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿರುವ ಸಂಜಯ್ ಹಾಗೂ ಪ್ರೀತಿ ಅವರಿಗೆ ಕಳೆದ ೧೫ ದಿನಗಳ ಹಿಂದಷ್ಟೇ ವಿವಾಹವಾಗಿತ್ತು. ಈ ವಾರದಲ್ಲಿ ಇಬ್ಬರೂ ಬೆಂಗಳೂರಿಗೆ ತೆರಳುವವರಿದ್ದರು. ಅಷ್ಟರಲ್ಲಿ ವಿಧಿ ತನ್ನ ಆಟವನ್ನು ಆಡಿದೆ. ಇಡಿ ಕುಟುಂಬವು ಶೋಕಸಾಗರದಲ್ಲಿ ಮುಳುಗಿದೆ.

ಮುಖ ಸವರಿ ಕಣ್ಣೀರಿಟ್ಟ ಪತ್ನಿ
ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಪ್ರೀತಿ ಕೈಗೆ ಪ್ಲಾಸ್ಟರ್‌ ಹಾಗೂ ತಲೆಗೆ ಬ್ಯಾಂಡೇಜ್ ಕಟ್ಟಲಾಗಿತ್ತು. ಏಳಲಾಗದ ಸ್ಥಿತಿಯಲ್ಲಿದ್ದರಿಂದ ಪತಿ ಸಂಜಯ್‌ ಮೃತದೇಹವನ್ನು ಅಂತಿಮವಾಗಿ ನೋಡಲು ಆಕೆಯನ್ನು ಸ್ಟ್ರೆಚರ್‌ನಲ್ಲಿಯೇ ಕರೆತರಲಾಯಿತು. ಪತಿಯ ಮೃತದೇಹವನ್ನು ನೋಡಿದ ಪ್ರೀತಿ ಕಣ್ಣುಗಳು ತುಂಬಿಬಂದವು. ಪ್ರೀತಿಯಿಂದ ಸಂಜಯ್‌ ಮುಖ ಸವರಿದರು, ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತರು.

ಸದ್ಯ ಜಿಗಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಸಂಜಯ್‌ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ನವ ವಿವಾಹಿತ ದಂಪತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ | Dog menace | ನಾಲ್ವರನ್ನು ಕಚ್ಚಿ ಗಾಯಗೊಳಿಸಿದ ಹುಚ್ಚು ನಾಯಿಯನ್ನು ಅಡ್ಡಾಡಿಸಿ ಕೊಂದ ಗ್ರಾಮಸ್ಥರು

Exit mobile version