ಕಲಬುರಗಿ/ವಿಜಯಪುರ: ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ-ಡಿಗ್ಗಿ ತಾಂಡದಲ್ಲಿ (Road Accident) ನಡೆದಿದೆ. ವಾಡಿ ಪೊಲೀಸ್ ಠಾಣೆ ಪೇದೆ ಕರಿಯಪ್ಪ (37) ಮೃತ ದುರ್ದೈವಿ ಆಗಿದ್ದಾರೆ.
ಪೇದೆ ಕರಿಯಪ್ಪ ಭಾನುವಾರ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದರು. ಮನೆಯಲ್ಲಿ ಊಟ ಮುಗಿಸಿ, ಬೈಕ್‌ನಲ್ಲಿ ನಾಲವಾರ್ ಚೆಕ್‌ಪೋಸ್ಟ್ ಕಡೆಗೆ ಹೋಗುವಾಗ ಅಪರಿಚಿತ ವಾಹನವು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನೆಲಕ್ಕೆ ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಕರಿಯಪ್ಪ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಲಬುರಗಿ ಎಸ್‌ಪಿ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ತುಂಬಿದ ಟ್ರ್ಯಾಕ್ಟರ್ ಪಲ್ಟಿ, ಚಾಲಕ ಸ್ಥಳದಲ್ಲಿ ಸಾವು
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೆಸರಟ್ಟಿ ಕ್ರಾಸ್ ಬಳಿ ಮರಳು ತುಂಬಿದ ಟ್ರ್ಯಾಕ್ಟರ್ ಪಲ್ಟಿ ಆಗಿ ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮಹೇಶ ತಳವಾರ (22) ಮೃತಪಟ್ಟಿರುವ ದುರ್ದೈವಿ ಆಗಿದ್ದಾರೆ.
ಅಂಬಳನೂರ ಬಳಿಯ ಡೋಣಿ ನದಿಯಿಂದ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಟ್ರ್ಯಾಕ್ಟರ್‌ನಲ್ಲಿದ್ದ ಮಹೇಶ ಕೆಳಗೆ ಬಿದ್ದಿದ್ದು, ಆತನ ಮೇಲೆ ಮರಳು ತುಂಬಿದ ಟ್ರೇಲರ್ ಬಿದ್ದಿದೆ. ಪರಿಣಾಮ ಮಹೇಶ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲೋ ಬಿಪಿಯಿಂದಾಗಿ ಎಎಸ್‌ಐ ಮೃತ್ಯು; ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಉರುಳಿಬಿದ್ದರು
ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಎಎಸ್‌ಐ (ASI Death) ಒಬ್ಬರು ಮೃತಪಟ್ಟಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೈ ಶ್ರೀನಿವಾಸ್ (59) ಮೃತ ದುರ್ದೈವಿ.
ಶ್ರೀನಿವಾಸ್ ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದು, ವಾರದ ಹಿಂದೆ ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಕುಸಿದುಬಿದ್ದಿದ್ದರು. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಲೋ ಬಿಪಿ ಸಮಸ್ಯೆ ಉಂಟಾಗಿ ಅವರು ಬೈಕ್‌ನಿಂದ ಬಿದ್ದಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತೀಚೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತ ಪ್ರಾಣ ಕಳೆದುಕೊಳ್ಳುತ್ತಿರುವುದು ಹೆಚ್ಚಾಗಿದೆ. ಹೆಚ್ಚಿನ ಮಂದಿ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಇತ್ತೀಚೆಗೆ ಅಧ್ಯಯನವೊಂದು ತಿಳಿಸಿತ್ತು.
ತೆಂಗಿನ ಮರ ಉರುಳಿಬಿದ್ದು ರೈತ ಸಾವು
ಕೆಲವೊಂದು ಆಕಸ್ಮಿಕಗಳು ಹೇಗೆ ಸಂಭವಿಸುತ್ತವೆ (Accidental death) ಎಂದು ಹೇಳುವುದಕ್ಕೇ ಸಾಧ್ಯವಿಲ್ಲ. ಜಮೀನಿನಲ್ಲಿ ನಡೆದುಕೊಂಡು ಹೋಗುವಾಗ ತೆಂಗಿನಮರವೊಂದು ಉರುಳಿಬಿದ್ದು ಅದರ ಅಡಿಗೆ ಸಿಲುಕಿ ರೈತರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ರಾಮನಗರದ ಚನ್ನಪಟ್ಟಣ ತಾಲೂಕಿನ ಗಿಜಗದಾಸನದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪುಟ್ಟಸ್ವಾಮಿಗೌಡ (56) ಮೃತಪಟ್ಟ ದುರ್ದೈವಿ.
ಇದನ್ನೂ ಓದಿ: Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ
ಇವರು ತೆಂಗಿನ ತೋಟದಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ಮರ ಉರುಳಿಬಿದ್ದಿದೆ. ಕೊನೆಯ ಕ್ಷಣದಲ್ಲಿ ಮರ ಉರುಳುವುದು ಗೊತ್ತಾದರೂ ತಪ್ಪಿಸಿಕೊಳ್ಳುವಷ್ಟು ಸಮಯಾವಕಾಶವೇ ಸಿಗಲಿಲ್ಲ. ಹೀಗಾಗಿ ನೇರವಾಗಿ ಅವರ ಮೇಲೆಯೇ ಮರ ಉರುಳಿ ಬಿದ್ದಿದೆ. ಮರದಡಿ ಸಿಲುಕಿದ ಅವರು ರಕ್ತಸ್ರಾವದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅಕ್ಕೂರು ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ನಡೆಯುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ