ಅಂಕೋಲಾ: ರಸ್ತೆಯ ಬದಿಯ ಕಚ್ಚಾ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿಯೊಬ್ಬರಿಗೆ ರಿಕ್ಷಾ ಬಡಿದು (Road accident) ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾವಿಕೇರಿಯಲ್ಲಿ ನಡೆದಿದೆ. ಶೋಭಾ ಗೋಪಾಲ ನಾಯಕ (28) ಮೃತ ಮಹಿಳೆ.
ಸುಮಾರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಇವರು ತನ್ನ ಮನೆ ಮುಂದಿನ ಡಾಂಬರು ರಸ್ತೆ ಪಕ್ಕದ ಮಣ್ಣಿನ ರಸ್ತೆಯಲ್ಲಿ ತನ್ನ ಗಂಡನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ರಿಕ್ಷಾ ಚಾಲಕ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆಸಿದ್ದಾನೆ.
ಅಪಘಾತದ ರಭಸಕ್ಕೆ ಗರ್ಭಿಣಿ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪಟ್ಟಣದ ಲಕ್ಷೇಶ್ವರ – ಕುಂಬಾರಕೇರಿ ವ್ಯಾಪ್ತಿಯ ರಿಕ್ಷಾ ಚಾಲಕ ಇವನಾಗಿದ್ದು, ಘಟನೆ ಬಳಿಕ ರಿಕ್ಷಾ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಅಪಘಾತ ಪರಿಹಾರ ವಿಮಾ ಹಣ ನೀಡದ ಸರ್ಕಾರಿ ಬಸ್ ಜಪ್ತಿ
ಹೊನ್ನಾವರ: ಅಪಘಾತದಿಂದ ಮೃತಪಟ್ಟವರ ಕುಟುಂಬಕ್ಕೆ ಅಪಘಾತ ಪರಿಹಾರ ವಿಮಾ ಹಣವನ್ನು ನೀಡದೇ ಇದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಿಬ್ಬಂದಿ ಕೆ.ಎಸ್.ಆರ್.ಟಿ.ಸಿ. ಕುಮಟಾ ಡಿಪೋ ಬಸ್ ಒಂದನ್ನು ಜಪ್ತಿ ಮಾಡಿದ್ದಾರೆ. ಸಿಬ್ಬಂದಿ ಬಸ್‌ನ್ನು ವಶಕ್ಕೆ ಪಡೆದು ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ತಾಲೂಕಿನ ಕೆಕ್ಕಾರ ಗ್ರಾಮದ ಶಂಕರ ಗೌಡ ಎಂಬವರು 2019ರ ಆಗಸ್ಟ್‌ನಲ್ಲಿ ಅಂಕೋಲಾದ ಹೊಸೂರ ಕ್ರಾಸ್ ಬಳಿ ಬಸ್ ಹತ್ತಿ ಮನೆಗೆ ಮರಳುತ್ತಿದ್ದರು. ಆ ಸಮಯದಲ್ಲಿ ಅವರು ಬಸ್ಸಿನಿಂದ ರಸ್ತೆಗೆ ಬಿದ್ದು ಮೃತಪಟ್ಟಿದ್ದರು. ಮೃತನ ಪತ್ನಿ ನಾಗರತ್ನ ಗೌಡ ಅಪಘಾತ ಪರಿಹಾರ ಕೋರಿ ಹೊನ್ನಾವರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಮಾಡಿದ ನ್ಯಾಯಾಲಯವು ಮೃತನ ಕುಟುಂಬಕ್ಕೆ ಪರಿಹಾರ ಹಣ ನೀಡಲು ಆದೇಶ ನೀಡಿತ್ತು.
ನ್ಯಾಯಾಲಯ ನಿಗದಿ ಪಡಿಸಿದ ಅವಧಿಯಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ಮೃತನ ಕುಟುಂಬಕ್ಕೆ ಪರಿಹಾರ ನೀಡಿರಲಿಲ್ಲ. ಕೋರ್ಟ್ ಹೇಳಿದ ಅವಧಿಯಲ್ಲಿ ಸಂಸ್ಥೆ ಹಣ ನೀಡದೇ ಇದ್ದರಿಂದ ಅರ್ಜಿದಾರರು ಕೆ.ಎಸ್.ಆರ್.ಟಿ.ಸಿ ವಿರುದ್ಧ ಹಣ ವಸೂಲಿಗೆ ಅಮಲ್‌ಜಾರಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯವು ಹೇಳಿದ ಮೊತ್ತ ಹಾಗೂ ಅದರ ಮೇಲಿನ ಬಡ್ಡಿ ಎಲ್ಲಾ ಸೇರಿ, 16,46,388 ರೂ. ಪರಿಹಾರ ನೀಡಬೇಕು ಎಂದು ಕೋರಿ ಕೊಂಡಿದ್ದರು. ಆಗಲೂ ಸಹ ಕೆ.ಎಸ್.ಆರ್.ಟಿ.ಸಿ ಹಣ ಪಾವತಿಸಲು ವಿಫಲ ಆದ ಹಿನ್ನೆಲೆಯಲ್ಲಿ ಹೊನ್ನಾವರ ನ್ಯಾಯಾಧೀಶ ಕುಮಾರ ಜಿ ಅವರು ಬಸ್ ಜಪ್ತಿಪಡಿಸಲು ಆದೇಶ ನೀಡಿದ್ದರು.
ನ್ಯಾಯಾಲಯದ ಆದೇಶದ ಅನ್ವಯ ಹೊನ್ನಾವರ ಸೀವಿಲ್ ಕೋರ್ಟ ಸಿಬ್ಬಂದಿಗಳಾದ ಎಸ್.ಎಸ್ ಗೊಂಡಾ ಹಾಗೂ ಎಸ್ ಎನ್ ಶೆಟ್ಟಿ ಬಸ್ ಜಪ್ತಿ ಪಡಿಸಿಕೊಂಡು ಮಂಗಳವಾರ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದರು. ಅರ್ಜಿದಾರರ ಪರವಾಗಿ ನ್ಯಾಯವಾದಿ ಎಮ್.ಎಲ್ ನಾಯ್ಕ ಪ್ರತಿನಿಧಿಸಿದ್ದರು.
ಇದನ್ನೂ ಓದಿ : Elephant Attack: ತೋಟಕ್ಕೆ ಬಂದು ಕೆರೆಗೆ ಬಿದ್ದ ನಾಲ್ಕು ಕಾಡಾನೆಗಳು