ಕೊಡಗು: ಖಾಸಗಿ ಬಸ್ ಹಾಗೂ ದ್ವಿಚಕ್ರ ನಡುವೆ ಭೀಕರ ಅಪಘಾತ (Road Accident) ಸಂಭವಿಸಿ, ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸುಂಟಿಕೊಪ್ಪದ ಗದ್ದೆಹಳ್ಳ ಬಳಿ ನಡೆದಿದೆ. ಸುಂಟಿಕೊಪ್ಪ ನಿವಾಸಿ ಪಟ್ಟೆಮನೆ ಲೋಕೇಶ್ ಕುಮಾರ್ (59) ಮೃತ ದುರ್ದೈವಿ.
ಕಳೆದ ಹಲವು ವರ್ಷಗಳಿಂದ ಲೋಕೇಶ್ ವಾಹನ ಚಾಲಕರಾಗಿದ್ದರು. ಸುಂಟಿಕೊಪ್ಪದ ಗದ್ದೆಹಳ್ಳ ಬಳಿ ತೆರಳುತ್ತಿದ್ದಾಗ ಖಾಸಗಿ ಬಸ್‌ನೊಂದಿಗೆ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ | Actor Darshan: ಸಂಸ್ಕಾರ ಹಾಗೂ ಶಿಕ್ಷಣ ಮುಖ್ಯ, ದರ್ಶನ್ ಬಳಿ ಎರಡೂ ಇಲ್ಲ; ಶಿಷ್ಯನ ಬಗ್ಗೆ ಗುರು ಬೇಸರ!
ಭೀಮಾ ತೀರದಲ್ಲಿ ಗುಂಡಿನ ದಾಳಿ; ರೌಡಿಶೀಟರ್ ಸ್ಥಳದಲ್ಲೇ ಸಾವು
ವಿಜಯಪುರ: ಭೀಮಾ ತೀರದಲ್ಲಿ ಗುಂಡಿನ ದಾಳಿ ನಡೆದು, ರೌಡಿಶೀಟರ್ ಮೃತಪಟ್ಟಿದ್ದಾನೆ. ಜಿಲ್ಲೆಯ ಚಡಚಣ ಪಟ್ಟಣದ ನೀವರಗಿ ರಸ್ತೆಯ ಮನೆ ಬಳಿ ಇದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ (Shootout Case) ನಡೆಸಿ ರೌಡಿಶೀಟರ್‌ನ ಕೊಲ್ಲಲಾಗಿದೆ.
ಅಶೋಕ ಮಲ್ಲಪ್ಪ ಗಂಟಗಲ್ಲಿ ಮೃತ. ಮನೆಯಿಂದ ಚಟಚಟಣ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಹಂತಕರು ದಾಳಿ ಮಾಡಿದ್ದಾರೆ. ಅಶೋಕ ಬೆನ್ನಿಗೆ ಮೂರಕ್ಕೂ ಅಧಿಕ ಗುಂಡಿಗಳು ತಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತೀಚೆಗೆ ಜೈಲಿನಿಂದ ಪೆರೋಲ್ ಮೇಲೆ ಅಶೋಕ ಹೊರಬಂದಿದ್ದ. ಕೊಲೆ ಹಾಗೂ ಇತರೆ ಕೇಸ್‌ಗಳಲ್ಲಿ ಅಪರಾಧಿಯಾಗಿದ್ದ ವ್ಯಕ್ತಿಯನ್ನು ಹಳೆ ದ್ವೇಷದಿಂದ ಕೊಲೆ ಮಾಡಿರೋ ಸಂಶಯ ಮೂಡಿದೆ.
ಕೊಲೆಗೀಡಾದ ಅಶೋಕ ಪತ್ನಿ ಚಡಚಣ ಪಟ್ಟಣದ ವಾರ್ಡ್ ನಂಬರ್ 2ರ ಬಿಜೆಪಿ ಸದಸ್ಯೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚಡಚಣ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಓವರ್ ಟೇಕ್ ವಿಷ್ಯಕ್ಕೆ ಯುವಕನ ಕೊಚ್ಚಿ ಕೊಂದ ದುಷ್ಕರ್ಮಿಗಳು; ಮಗನ ಶವ ಕಂಡು ತಂದೆ ಕಣ್ಣೀರು
ಹೊಸಕೋಟೆ: ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದನ್ನು ಪ್ರಶ್ನೆ (Murder Case) ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿ ಹೋಗಿದ್ದಾನೆ. ನವೀನ್ ನಾಯಕ್ ಮೃತ (27) ದುರ್ದೈವಿ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಕೋಲಾರ ರಾಷ್ಟ್ರೀಯ ಹೆದ್ದಾರಿ ಎನ್‌ಹೆಚ್ 75 ಡಾಬ ಬಳಿ ಘಟನೆ ನಡೆದಿದೆ.
ನವೀನ್ ನಾಯಕ್ ಗಂಗಾಪುರ ಗ್ರಾಮದ ನಿವಾಸಿಯಾಗಿದ್ದಾನೆ. ಭಾನುವಾರ ಬೆಳಗಿನ ಜಾವ ತರಕಾರಿ ವ್ಯಾಪಾರಕ್ಕೆ ಕಾರೊಂದರಲ್ಲಿ ಹೋಗುತ್ತಿದ್ದಾಗ, ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದವರನ್ನು ನವೀನ್ ನಾಯಕ್ ಪ್ರಶ್ನೆ ಮಾಡಿದ್ದ. ಈ ವೇಳೆ ಕಾರಿನಲ್ಲಿದ್ದವರಿಗೂ ನವೀನ್ ನಡುವೆ ಗಲಾಟೆ ನಡೆದಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊಸಕೋಟೆ ಡಿವೈಎಸ್‌ಪಿ ಶಂಕರ್ ಗೌಡ ಅಣ್ಣ ಸಾಹೇಬ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಓವರ್ ಟೇಕ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಾರಣಾಂತಿಕವಾಗಿ ನಾಲ್ವರು ಹಲ್ಲೆ ನಡೆಸಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ | Renuka Swamy Murder: ರೇಣುಕಾಸ್ವಾಮಿಗೆ 4 ಬಾರಿ ಎಲೆಕ್ಟ್ರಿಕ್ ಶಾಕ್; ಪೋಸ್ಟ್ ಮಾರ್ಟಂ ವರದಿಯಲ್ಲಿವೆ ಭಯಾನಕ ಅಂಶಗಳು!
ರಸ್ತೆ ಬದಿಯಲ್ಲಿ ಬಿದ್ದಿದ್ದ ನವೀನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪರಾರಿ ಆಗಿರುವ ಹಂತಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.