Site icon Vistara News

Road Accident : ಟಿಪ್ಪರ್‌ ಲಾರಿಗೆ ಛಿದ್ರಗೊಂಡ ಸವಾರ; ಕಾರಿಗೆ ಜೀಪ್‌, ಕ್ಯಾಂಟರ್‌ಗಳ ಮುಖಾಮುಖಿ ಡಿಕ್ಕಿ

Road Accident in Karnataka

ಬೆಂಗಳೂರು/ಚಿಕ್ಕಬಳ್ಳಾಪುರ/ಚಿಕ್ಕಮಗಳೂರು: ರಸ್ತೆ ಅಪಘಾತಗಳು ಹೆಚ್ಚಾಗುತ್ತಿದೆ. ಬೆಂಗಳೂರಲ್ಲಿ ಟಿಪ್ಪರ್‌ ಲಾರಿಯು ಬೈಕ್‌ ಸವಾರನ ಪ್ರಾಣವನ್ನೇ ತೆಗೆದರೆ, ಚಿಕ್ಕಬಳ್ಳಾಪುರದಲ್ಲಿ ಕ್ಯಾಂಟರ್‌ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಇತ್ತ ಚಿಕ್ಕಮಗಳೂರಲ್ಲಿ ಕಾರಿಗೆ ಜೀಪ್‌ ಡಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡಿದ್ದಾರೆ.

ಸವಾರನ ಪ್ರಾಣ ತೆಗೆದ ಟಿಪ್ಪರ್‌ ಲಾರಿ

ಬೈಕ್‌ಗೆ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಅಸುನೀಗಿದ್ದಾರೆ. ಬೈಕ್ ಸವಾರ ಅರುಣ್ (28) ಸ್ಥಳದಲ್ಲೆ ಮೃತಪಟ್ಟವರು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಡಿಮಾರ್ಟ್ ಬಳಿ ಈ ಅಪಘಾತ (Road Accident) ಸಂಭವಿಸಿದೆ. ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ.

Road Accident in chikkmagalur

ಅರುಣ್‌ ಕ್ಯಾಬ್ ಜೆಮಿನಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ, ವೇಗವಾಗಿ ಬಂದ ಟಿಪ್ಪರ್ ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ನಿಯಂತ್ರಣ ತಪ್ಪಿ ಕೆಳಬಿದ್ದ ಅರುಣ್ ಮೇಲೆ ಲಾರಿಯು ಹರಿದಿದೆ. ಪರಿಣಾಮ ಅರುಣ್‌ನ ಸೊಂಟದ ಭಾಗವೆಲ್ಲವೂ ಛಿದ್ರಗೊಂಡಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಚೆಲ್ಲಾಪಿಲ್ಲಿಯಾಗಿದ್ದ ಅರುಣ್‌ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದರು. ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Bengaluru News : ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ; ಚಕ್ರಕ್ಕೆ ಸಿಕ್ಕಿ ನರಳಾಡಿ ಸತ್ತ ಶ್ವಾನ

Road Accident in chikkmagalur

ಚಿಕ್ಕಬಳ್ಳಾಪುರದಲ್ಲಿ ಕ್ಯಾಂಟರ್‌ ವಾಹನಗಳ ಮುಖಾಮುಖಿ ಡಿಕ್ಕಿ

ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಬೆಳ್ಳಂಬೆಳ್ಳಗ್ಗೆ ಎರಡು ಕ್ಯಾಂಟರ್‌ಗಳ ನಡುವೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಇಬ್ಬರು ಚಾಲಕರು ಗಂಭೀರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ‌ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಮಾರ್ಗದಲ್ಲಿರುವ ಅಮ್ಮನಕೆರೆ ಕಟ್ಟಮೇಲೆ ಈ ಅಪಘಾತ ಸಂಭವಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಕ್ಯಾಂಟರ್‌ಗಳು ಸಂಪೂರ್ಣ ಜಖಂಗೊಂಡಿದ್ದವು. ಅಪಘಾತದಿಂದಾಗಿ ಕೆಲಕಾಲ ಸಂಚಾರದಲ್ಲಿ ದಟ್ಟಣೆಯು ಉಂಟಾಗಿತ್ತು.

Road Accident in chikkmagalur

ಚಿಕ್ಕಮಗಳೂರಲ್ಲಿ ಕಾರು ಹಾಗೂ ಜೀಪ್ ನಡುವೆ ಡಿಕ್ಕಿ

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ಸಮೀಪ ಜೀಪ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಜೀಪ್‌ ಹಾಗೂ ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಜೀಪ್ ಚಾಲಕ ಅತೀ ವೇಗವಾಗಿ ಬಂದಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version