ಆನೇಕಲ್/ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ಮತ್ತು ರಾಜಾನುಕುಂಟೆಯಲ್ಲಿ ಸಂಭವಿಸಿದ ಭೀಕರ ರಸ್ತೆ ದುರಂತಗಳಲ್ಲಿ ಮೊಮ್ಮಕ್ಕಳ ಜತೆ ಹೋಗುತ್ತಿದ್ದ ವೃದ್ಧೆ ಮತ್ತು ಇಬ್ಬರು ಬೈಕ್ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ.
ಆನೇಕಲ್‌ನಲ್ಲಿ ವೃದ್ಧೆ ಸಾವು, ಮೊಮ್ಮಕ್ಕಳಿಗೆ ಗಾಯ
ಆನೇಕಲ್- ಬನ್ನೇರುಘಟ್ಟ ರಸ್ತೆಯ ಇಂಡ್ಲವಾಡಿ ಕ್ರಾಸ್ ಬಳಿ ಗುರುವಾರ (ಮೇ 11) ಭೀಕರ ಅಪಘಾತದಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ದೆ ಬಲಿಯಾಗಿದ್ದಾರೆ. ಇಂಡ್ಲವಾಡಿ ಗ್ರಾಮದ ನಿವಾಸಿ ನಿಂಗಮ್ಮ(60) ಮೃತದುರ್ದೈವಿ ಆಗಿದ್ದಾರೆ.
ವೃದ್ಧೆ ನಿಂಗಮ್ಮ ಮನೆಗೆ ಬೇಕಾದ ವಸ್ತು ತರಲು ಮೊಮ್ಮಗ, ಮೊಮ್ಮಗಳು ಜತೆ ಬೈಕ್‌ನಲ್ಲಿ ಆನೇಕಲ್ ಪಟ್ಟಣಕ್ಕೆ ಹೋಗುತ್ತಿದ್ದರು. ಮೊಮ್ಮಗ ಸಂದೀಪ್ ಬೈಕ್ ಓಡಿಸಿಕೊಂಡು ಬರುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಿಂಗಮ್ಮ ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂದೀಪ್ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತವಾಗಿದೆ ಎಂದು ಮೃತರ ಸಂಬಂಧಿಗಳು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕಾರು-ಬೈಕ್ ನಡುವೆ ಭೀಕರ ಅಪಘಾತ
ಬೆಂಗಳೂರು ನಗರದ ಯಲಹಂಕ ತಾಲೂಕಿನ ರಾಜಾನುಕುಂಟೆ ಕಾಕೋಳು ರಸ್ತೆಯ ಚಲ್ಲಹಳ್ಳಿ ಬಳಿ ಗುರುವಾರ ಬೆಳಗ್ಗೆ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಚಲ್ಲಹಳ್ಳಿ ಗ್ರಾಮದ ರಾಮಯ್ಯ (39), ನಾಗರಾಜ್ (42) ಮೃತ ದುರ್ದೈವಿಗಳಾಗಿದ್ದಾರೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯಿಂದ ನೂರು ಮೀಟರ್ ದೂರದಲ್ಲಿ ಬೈಕ್ ಬಿದ್ದಿದೆ. ಇತ್ತ ಅವೈಜ್ಞಾನಿಕ ರಸ್ತೆ ಉಬ್ಬುಗಳ ನಿರ್ಮಾಣದಿಂದಲೇ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಮೃತರ ಸಂಬಂಧಿಗಳು ಆಕ್ರೋಶ ಹೊರಹಾಕಿದ್ದಾರೆ. ಪಿಡಬ್ಲ್ಯೂಡಿ (PWD) ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದು, ಮೃತ ದೇಹಗಳನ್ನು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.
ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತರ ಸಂಬಂಧಿಗಳನ್ನು ಸಮಾಧಾನಪಡಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಬಿಎಂಟಿಸಿ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಇಂಡ್ಲವಾಡಿ ಕ್ರಾಸ್ ಬಳಿ ಬಿಎಂಟಿಸಿ ಬಸ್‌ವೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.
ಇದನ್ನೂ ಓದಿ: Elephant attack: ಸಕಲೇಶಪುರದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಲಗ್ಗೆ; ಕಾಫಿ ತೋಟದ ಗೇಟ್ ಮುರಿದು, ಬೆಳೆ ಹಾನಿ
ಮೆಜೆಸ್ಟಿಕ್‌ನಿಂದ ಆನೇಕಲ್‌ಗೆ ಹೋಗುತ್ತಿದ್ದ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಬ್ರೇಕ್ ಜಾಮ್ ಆಗಿದೆ. ಅನುಮಾನಗೊಂಡು ನೋಡಿದಾಗ ಹೊಗೆ ಬರುತ್ತಿರುವುದು ಕಂಡಿದ್ದು, ಕೂಡಲೇ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ದುರಂತವೊಂದು ತಪ್ಪಿದೆ. ಸದ್ಯ ಪ್ರಯಾಣಿಕರನ್ನು ಮತ್ತೊಂದು ಬಸ್ಸಿಗೆ ಕಳುಹಿಸಲಾಗಿದೆ.