Site icon Vistara News

Road Accident : ಆಯತಪ್ಪಿ ಬಿದ್ದ ಸವಾರನ ಮೇಲೆ ಹರಿದ ಲಾರಿ! ತುಂಡಾದ ದೇಹ

Road accident in Tumkur

ತುಮಕೂರು: ತುಮಕೂರಲ್ಲಿ ಭೀಕರ ರಸ್ತೆ ಅಪಘಾತ (Road Accident) ನಡೆದಿದೆ. ಚಲಿಸುತ್ತಿದ್ದ ಬೈಕ್‌ನಲ್ಲಿ ಆಯತಪ್ಪಿ ಕೆಳಗೆ ಬಿದ್ದ ಸವಾರನ ಮೇಲೆ ಲಾರಿ ಹರಿದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ದೇಹವು ಎರಡು ತುಂಡಾಗಿದೆ. ಆರ್.ಹರೀಶ್ (21) ಮೃತ ದುರ್ದೈವಿ.

ಹರೀಶ್‌ ಚಿತ್ರದುರ್ಗದ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುವಾಗ ಈ ದುರ್ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಂಟ್ರಿ ಕ್ಲಬ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಚಿತ್ರದುರ್ಗ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ.

ಬೆಂಗಳೂರು ನಗರದ ದೊಮ್ಮರಹಳ್ಳಿ ಮೂಲದ ಹರೀಶ್ ಅರ್ಚಕರಾಗಿದ್ದು, ಇತ್ತೀಚೆಗೆ ನಾಲ್ಕು ಲಕ್ಷ ಬೆಲೆಯ ಬೈಕ್ ಖರೀದಿಸಿದ್ದರು. ಆದರೆ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಳ್ಳಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident : ಲಾರಿ ಓವರ್‌ ಟೇಕ್ ಮಾಡಲು ಹೋಗಿ ಸಾವಿನ ಮನೆ ಸೇರಿದ ನಾಲ್ವರು! ಮತ್ತೊಬ್ಬ ಗಂಭೀರ

ಅಡ್ಡಾದಿಡ್ಡಿಯಾಗಿ ಬಂದ ಲಾರಿಯಿಂದ ಸರಣಿ ಅಪಘಾತ

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬಳಿ ಅಡ್ಡಾದಿಡ್ಡಿ ಬಂದ ಲಾರಿಯಿಂದ ಸರಣಿ ಅಪಘಾತ ಸಂಭವಿಸಿದೆ. ಮೈನ್ಸ್ ಲಾರಿ ಚಾಲಕನ ಅಜಾಗರುಕತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಹೆದ್ದಾರಿ ಬಿಟ್ಟು ಸರ್ವಿಸ್‌ ರಸ್ತೆಗೆ ನುಗ್ಗಿದ ಲಾರಿಯು ನಿಂತಿದ್ದ ಒಂದು ಆಟೋ ರಿಕ್ಷಾ ಹಾಗೂ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಫುಟ್ ಪಾತ್‌ನಲ್ಲಿದ್ದವರು ದಿಕ್ಕಪಾಲಾಗಿ ಓಡಿದರು.

ಘಟನೆಯಲ್ಲಿ ಬೈಕ್ ಸವಾರ‌ ಸಂಗಪ್ಪ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸಂಗಪ್ಪ ಅವರು ಮಗಳನ್ನು ಬಸ್ ಸ್ಟ್ಯಾಂಡ್‌ಗೆ ಬಿಡಲು ಬಂದಾಗ ಈ ಅಪಘಾತ ಸಂಭವಿಸಿದೆ. ಸಂಗಪ್ಪರ ಮಗಳು‌ ಸವಿತಾ ಹಾಗೂ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗೂ‌ ಗಾಯವಾಗಿವೆ. ಸುರತ್ಕಲ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಚಕ್ರಗಳು ಸಿಡಿದು ಬಸ್‌ ಪಲ್ಟಿ!

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಬಳಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಖಾಸಗಿ ಬಸ್‌ವೊಂದರ ಮುಂದಿನ ಚಕ್ರಗಳು ಸಿಡಿದು ಪಲ್ಟಿಯಾಗಿದೆ. ಭೀಕರ ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಕನಿಕಿರಿ ಗುಟ್ಟದ ಬಳಿ ದುರಂತ ನಡೆದಿದೆ. ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯದಿಂದ ಬಿಳ್ಳೂರು ಕಡೆ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿದ್ದು ಬಸ್‌ನೊಳಗೆ ಸಿಲುಕಿರುವ ಗಾಯಾಳುಗಳನ್ನು ರಕ್ಷಣೆ ಮಾಡಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version