ವಿಜಯನಗರ/ಆನೇಕಲ್/ವಿಜಯಪುರ: ಬೈಕ್ ಸವಾರನೊಬ್ಬ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದು ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಸವಾರ ಮೃತಪಟ್ಟಿರುವ (Road Accident) ಘಟನೆ ವಿಜಯನಗರದ ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಟೋಲ್ ಬಳಿ ನಡೆದಿದೆ. ಜೆಸಿಬಿ ಆಪರೇಟರ್ ಆಗಿದ್ದ ಪೊತಲಕಟ್ಟಿಯ ಮಲ್ಲೇಶ್ ಮೃತರು. ಸರ್ವಿಸ್ ರಸ್ತೆ ಇಲ್ಲದಿರುವುದೇ ಈ ರೀತಿಯ ಅಪಘಾತಕ್ಕೆ ಕಾರಣವೆಂದು ಸ್ಥಳೀಯ ಆರೋಪಿಸಿದ್ದಾರೆ.
ಟಿಪ್ಪರ್ ಹರಿದು ವ್ಯಕ್ತಿ ಸಾವು
ಆನೇಕಲ್ ತಾಲೂಕಿನ ಚಂದಾಪುರದ ಬೆಂಗಳೂರು- ಹೊಸೂರು ಹೆದ್ದಾರಿಯ ಕೀರ್ತನಾ ಹೋಟೆಲ್ ಬಳಿ ಟಿಪ್ಪರ್ ಲಾರಿ ಹರಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ದೇಹ ಎರಡು ತುಂಡಾಗಿ ಬಿದ್ದಿದ್ದವು. ಓವರ್ ಲೋಡ್ ಹಾಕಿಕೊಂಡು ಅತಿವೇಗವಾಗಿ ಸಂಚರಿಸುವ ಟಿಪ್ಪರ್ ಲಾರಿ ಚಾಲಕರು ಅಮಾಯಕರ ಜೀವ ಬಲಿ ಪಡೆಯುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದು, ಹೆದ್ದಾರಿಯಲ್ಲಿ ಅಪಘಾತದಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಬಾವಿಗೆ ಜಿಗಿದು ರೈತ ಆತ್ಮಹತ್ಯೆ
ಸಾಲಬಾಧೆ ತಾಳಲಾರದೆ ರೈತ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಚಟ್ಟರಕಿ ಗ್ರಾಮದಲ್ಲಿ ಘಟನೆ ನಡೆದಿದೆ. ಶ್ರೀಶೈಲ ಹಲಸಂಗಿ (35) ಮೃತ ದುರ್ದೈವಿ. ತಾಂಬಾ ಡಿಸಿಸಿ ಬ್ಯಾಂಕ್, ಪಿಕೆಪಿಎಸ್, ಗ್ರಾಮೀಣ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ಅದನ್ನೂ ತೀರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ | Bellary Politics | ಜೀವದ ಗೆಳೆಯರು ದೂರ ದೂರವಾಗಲು ಅಹಂ ಕಾರಣವಾಯಿತೇ?