Site icon Vistara News

Road Accident: ವೇಗವಾಗಿ ಚಲಿಸುತ್ತಿದ್ದಾಗಲೇ ಸಿಡಿದ ಸ್ಕೂಟರ್‌ ಟಯರ್‌: ಟೆಕ್ಕಿ ಮಹಿಳೆ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

#image_title

ಬೆಂಗಳೂರು: ಇಲ್ಲಿನ ಹೊಸಕೆರೆಹಳ್ಳಿಯ ನೈಸ್‌ ರಸ್ತೆ ಬಳಿ ವೇಗವಾಗಿ (Road Accident) ಚಲಿಸುತ್ತಿದ್ದಾಗ ಸ್ಕೂಟರ್ ಟಯರ್‌ ಸ್ಫೋಟ (tyre burst) ಆಗಿದೆ. ಪರಿಣಾಮ ಸ್ಕೂಟರ್‌ನಲ್ಲಿದ್ದ ಇಬ್ಬರ ಪೈಕಿ ಹಿಂಬದಿ ಕುಳಿತಿದ್ದ ಮಹಿಳೆ ಉಸಿರು ಚೆಲ್ಲಿದ್ದಾರೆ. ಮತ್ತೊಬ್ಬ ಸವಾರನ ಸ್ಥಿತಿ ಗಂಭೀರವಾಗಿದೆ. ಸಾಫ್ಟ್‌ವೇರ್ ಇಂಜನಿಯರ್ ಆಗಿರುವ ಸುಲೋಚನಾ ಮೃತ ದುರ್ದೈವಿ.

ಭಾನುವಾರ ನೈಸ್‌ ರಸ್ತೆಯಲ್ಲಿ ಸುಲೋಚನಾ ತಮ್ಮ ಸ್ನೇಹಿತ ಆನಂದ್‌ನೊಂದಿಗೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಆನಂದ್ ಫುಲ್‌ ಹೆಲ್ಮೆಟ್‌ ಧರಿಸಿದ್ದರೆ, ಸುಲೋಚನಾ ಹಾಫ್‌ ಹೆಲ್ಮೆಟ್ ಧರಿಸಿದ್ದರು. ಕೋರಮಂಗಲ‌ದಿಂದ ಹೊಸಕೆರೆಹಳ್ಳಿ ಕಡೆ ಹೋಗುತ್ತಿದ್ದಾಗ, ಸ್ಕೂಟರ್ ಟಯರ್ ಬಸ್ಟ್‌ ಆಗಿದೆ.

ಸುಲೋಚನಾ ಮೃತ ದುರ್ದೈವಿ

ಈ ವೇಳೆ ನಿಯಂತ್ರಣಕ್ಕೆ ಸಿಗದೆ ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದು, ಸುಲೋಚನ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿತ್ತು. ಇಬ್ಬರು ಗಾಯಾಳುಗಳನ್ನು ಕೂಡಲೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು‌ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸುಲೋಚನಾ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ಇತ್ತ ಆನಂದ್ ಸ್ಥಿತಿಯೂ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಸುಲೋಚನಾ ಹಾಗೂ ಆನಂದ್ ಇಬ್ಬರು ಸಾಫ್ಟ್‌ವೇರ್ ಇಂಜನಿಯರ್‌ಗಳು ಎಂದು ತಿಳಿದು ಬಂದಿದೆ. ಸದ್ಯ ಸುಲೋಚನಾ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯ ಜವಾಬ್ದಾರಿ ಹೊತ್ತಿದ್ದ ಸುಲೋಚನಾ

24 ವರ್ಷದ ಸುಲೋಚನಾ ಮಂಡ್ಯ ಮೂಲದವರಾಗಿದ್ದು, ಬೆಂಗಳೂರಿನ ಜಯನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ತಾಯಿ ಜತೆ ವಾಸವಿದ್ದರು. ಸುಲೋಚನಳ ತಾಯಿ ಮನೆಗೆಲಸ ಮಾಡಿ ಮಗಳನ್ನು ಓದಿಸಿದ್ದರು. ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಒಂದೂವರೆ ವರ್ಷದ ಹಿಂದೆ ಕೋರಮಂಗಲದಲ್ಲಿರುವ ಕಂಪನಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ತಮ್ಮನ ಓದಿನ ಜವಾಬ್ದಾರಿ ಹೊತ್ತಿದ್ದ ಸುಲೋಚನಾ ಕುಟುಂಬಕ್ಕೆ ಆಧಾರವಾಗಿದ್ದವಳು ಈಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಭಾನುವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತ ಆನಂದ್​ ಜತೆ ನೈಸ್​ ರಸ್ತೆ ಮೂಲಕ ಕನಕಪುರಕ್ಕೆ ತೆರಳಿ ಅಲ್ಲಿ ಸುತ್ತಾಟ ನಡೆಸಿ ನಂತರ ಅದೇ ನೈಸ್​ ಮಾರ್ಗವಾಗಿ ವಾಪಾಸಾಗುತ್ತಿದ್ದರು. ಈ ವೇಳೆ ಅವರು ಓಡಿಸುತ್ತಿದ್ದ ಸುಝುಕಿ ಆಕ್ಸಿಸ್​ ವಾಹನದ ಹಿಂಬದಿಯ ಟೈರ್​ ಸ್ಫೋಟಗೊಂಡಿದೆ. ಈ ವೇಳೆ ನಿಯಂತ್ರಣ ತಪ್ಪಿ ಇಬ್ಬರು ರಭಸವಾಗಿ ರಸ್ತೆಗೆ ಬಿದ್ದಿದ್ದರು.

ಹಾಫ್​ ಹೆಲ್ಮೆಟ್​ ಧರಿಸಿದ್ದರಿಂದ ಸುಲೋಚನಾ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ತಕ್ಷಣ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇತ್ತ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಸರಿಯಾದ ಚಿಕಿತ್ಸೆ ನೀಡಿಲ್ಲ ಹೀಗಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ರಿಪ್ಪನ್‌ಪೇಟೆಯಲ್ಲಿ ಬೈಕ್‌ ಡಿಕ್ಕಿ, ಇಬ್ಬರಿಗೆ ತೀವ್ರ ಗಾಯ

ಶಿವಮೊಗ್ಗ: ಶಿವಮೊಗ್ಗದ ಗರ್ತಿಕೆರೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (road accident) ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆಯಲ್ಲಿ ಪಾದಚಾರಿಯೊಬ್ಬರಿಗೆ ಬೈಕ್ ಡಿಕ್ಕಿಯಾಗಿದೆ. ಪಾದಚಾರಿ ಹಾಗೂ ಚಾಲಕ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. ವಾಯಾಳುಗಳನ್ನು ಗರ್ತಿಕೆರೆ ನಿವಾಸಿ ನದೀಮ್ (22), ಚಿನ್ನಪ್ಪ(54) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Karnataka Elections : ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ದೇವರ ಮೊರೆ ಹೋದ ಅಭಿಮಾನಿ!

ಬೈಕಿನಲ್ಲಿ ನದೀಮ್ ಗರ್ತಿಕೆರೆ ಕಡೆಯಿಂದ ಮನೆಗೆ ತೆರಳುವಾಗ ದುರ್ಘಟನೆ ನಡೆದಿದೆ. ಪಾದಚಾರಿ ಚಿನ್ನಪ್ಪ ಅವರಿಗೆ ಬೈಕ್ ಡಿಕ್ಕಿಯಾಗಿದೆ. ನಂತರ ಬೈಕ್ ಪ್ರೌಢಶಾಲಾ ನಾಮಫಲಕಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರಿಗೂ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version