Site icon Vistara News

Road Accident: ಬಸ್ಸಿನ ಸ್ಟೇರಿಂಗ್‌ ಕಟ್‌; ಬೈಕ್‌ನಲ್ಲಿದ್ದ ತಂದೆ-ಮಗ ಮೃತ್ಯು

Road Accident

ರಾಮನಗರ/ತುಮಕೂರು: ಕೆಎಸ್‌ಆರ್‌ಟಿಸಿ ಬಸ್ಸಿನ ಸ್ಟೇರಿಂಗ್ ಕಟ್ ಆಗಿದ್ದು, ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ತಂದೆ- ಮಗ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೋಟಮಾರನಹಳ್ಳಿ ಗ್ರಾಮದ ತಂದೆ ಸಿದ್ದಯ್ಯ (65), ಮಗ ಅರುಣ್ (28) ಮೃತ ದುರ್ದೈವಿಗಳು.

ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆ ಏರಿ ಮೇಲೆ ಬರುವಾಗ ಈ ಅಪಘಾತ ಸಂಭವಿಸಿದೆ. ತಡೆಗೋಡೆ ಇದ್ದ ಪರಿಣಾಮ 30 ಜನ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಕಾರ್ಯಕ್ರಮಕ್ಕಾಗಿ ಹಂಪಿ ದೇಗುಲಕ್ಕೆ ಮೊಳೆ; ರಾಜ್ಯ ಸರ್ಕಾರಕ್ಕೆ ಎಎಸ್‌ಐ ನೋಟಿಸ್

ಬೈಕ್‌- ಕ್ಯಾಂಟರ್‌ ಮುಖಾಮುಖಿ ಡಿಕ್ಕಿ, ಸವಾರ ಸಾವು

ಬೈಕ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಣವೇನಹಳ್ಳಿ ಬಳಿ ಅಪಘಾತ ನಡೆದಿದೆ. ದೊಡ್ಡಬಳ್ಳಾಪುರ ಮೂಲದ ಹಾಲಪ್ಪನಹಳ್ಳಿ ನಿವಾಸಿ ಮುನಿರಾಜು (26) ಮೃತ ದುರ್ದೈವಿ.

ಕ್ಯಾಂಟರ್‌ ವಾಹನವು ತುಮಕೂರು ಕಡೆಯಿಂದ ಮಧುಗಿರಿ ಪಟ್ಟಣದ ಕಡೆ ಹೋಗುತ್ತಿತ್ತು. ಮಧುಗಿರಿ ಕಡೆಯಿಂದ ಬೈಕ್‌ ಕೊರಟಗೆರೆ ಕಡೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರೆ, ಹಿಂಬದಿ ಸವಾರನಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಿದೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಯಮನಂತೆ ಬಂದ ಟಿಪ್ಪರ್‌ಗೆ ಮಹಿಳೆ ಬಲಿ! ಸವಾರ ಗಂಭೀರ

ಬಾಗಲಕೊಟೆ: ಇಲ್ಲಿನ ಸೀಮಿಕೇರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬೈಕ್‌ ಹಿಂಬದಿಗೆ ಟಿಪ್ಪರ್ ವಾಹನ (Road Accident) ಡಿಕ್ಕಿಯಾಗಿದೆ. ಸ್ಥಳದಲ್ಲೇ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ತಬಶುಮ್ ಅತ್ತಾರ್ ಮೃತ ದುರ್ದೈವಿ.

ಗಲಗಲಿ ಮೂಲದ ತಬಶುಮ್ ಅತ್ತಾರ್‌ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಿಂದ ನವನಗರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಗದ್ದನಕೇರಿ ಗ್ರಾಮದಿಂದ ಬರುತ್ತಿದ್ದ ಟಿಪ್ಪರ್‌ ವಾಹನ ಒಮ್ಮೆಲೆ ಬೈಕ್‌ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ತಬಶುಮ್‌ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್‌ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಸ್ಥಳದಲ್ಲಿ ಮೃತ ತಬಶುಬ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version