ಬೆಳಗಾವಿ/ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿವಯೋಗಿ ಸರ್ಕಲ್ ಸಮೀಪ ಕಬ್ಬು ತುಂಬಿದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಬೈಕ್ ಮೇಲೆ (Road Accident) ಉರುಳಿ ಬಿದ್ದ ಘಟನೆ ನಡೆದಿದೆ. ಅಪಘಾತ ತಪ್ಪಿಸಲು ಹೋಗಿದ್ದರಿಂದ ಸ್ಕೂಟರ್ ಮೇಲೆ ಟ್ರ್ಯಾಕ್ಟರ್‌ನ ಟ್ರೇಲರ್ ಪಲ್ಟಿಯಾಗಿದೆ.
ಹಾರೂಗೇರಿಯಿಂದ ಅಥಣಿ ಕಡೆಗೆ ಬರುವಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಅಥಣಿ ತಾಲೂಕಿನ ಅಗ್ರಾಣಿ ಇಂಗಳಗಾಂವ್ ನಿವಾಸಿ ಕಲ್ಪನಾ ಚಂದ್ರಪ್ಪ ಮಾದರ (೨೫), ಕಾಗವಾಡ ಬಣಜವಾಡ ನಿವಾಸಿ ಶ್ರೀದೇವಿ ಪರಶುರಾಮ್ ಮಾಂಗ್ (೩೦) ಎಂಬುವವರು ಗಾಯಗೊಂಡಿದ್ದಾರೆ.
ಜೆಸಿಬಿ ಮೂಲಕ ಕಬ್ಬು ಎತ್ತಿ ಕಳಗೆ ಸಿಲುಕಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ತೀವ್ರ ಗಾಯಗೊಂಡ ಇಬ್ಬರೂ ಮಹಿಳೆಯರಿಗೆ ಪ್ರಥಮ ಚಿಕಿತ್ಸೆ ನೀಡಿ ಮೀರಜ್ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ರಾಂಗ್ ರೂಟ್ ಯಡವಟ್ಟು
ಬೆಂಗಳೂರಿನ ಸುಮನಹಳ್ಳಿ ಜಂಕ್ಷನ್ ಬಳಿ ರಾಂಗ್ ರೂಟ್‌ನಿಂದ ಬಂದ ಟೆಂಪೋವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಕೆಂಗೇರಿ ಮೂಲದ ಜಗದೀಶ್ ಎಂಬುವವರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಉಂಟಾಗಿತ್ತು.
ಇದನ್ನೂ ಓದಿ: Karnataka Budget 2023: ಸಾರಿಗೆ ಸಂಸ್ಥೆ ಸಿಬ್ಬಂದಿಗೆ ₹1 ಕೋಟಿ ಮೊತ್ತದ ಅಪಘಾತ ವಿಮೆ; ಸಾರಿಗೆ ಸುಧಾರಣೆಗೆ ಮತ್ತೇನು ಘೋಷಣೆ?
ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ ಹಿನ್ನೆಲೆ ಆಟೋದಲ್ಲಿಯೇ ಬೈಕ್ ಸವಾರ ಜಗದೀಶ್‌ರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಅಪಘಾತದಿಂದ ಸುಮನಹಳ್ಳಿ ಬಳಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಂಗ್ ರೂಟ್‌ನಲ್ಲಿ ಬಂದು ಡಿಕ್ಕಿ ಹೊಡೆದ ಟೆಂಪೋ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದರು. ಟೆಂಪೋ ಚಾಲಕ ಕುಡಿದು ವಾಹನ ಚಾಲನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.