ಚಾಮರಾಜನಗರ : ಇಲ್ಲಿನ ಗುಂಡ್ಲುಪೇಟೆ ತಾಲೂಕಿನ ಹುಂಡಿಮನೆ ರಸ್ತೆಯಲ್ಲಿ ಟಾಟಾ ಏಸ್ ವಾಹನವು (Road Accident) ಪಲ್ಟಿಯಾಗಿದೆ. ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾಚಹಳ್ಳಿ ಗ್ರಾಮದವರು ಭೀಮನ ಅಮಾವಾಸ್ಯೆ ಹಿನ್ನೆಲೆ ಕೋಡಹಳ್ಳಿ ಮಹದೇಶ್ವರ ಜಾತ್ರೆಗೆ ಹೋಗಿದ್ದರು. ಜಾತ್ರೆ ಮುಗಿಸಿ ಊರಿಗೆ ಹಿಂದಿರುಗಲು ಬಸ್ ಇಲ್ಲವೆಂದು ಟಾಟಾ ಏಸ್ ವಾಹನವನ್ನು ಹತ್ತಿದ್ದರು. ಆದರೆ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನವು ಪಲ್ಟಿಯಾಗಿದೆ. ಮಕ್ಕಳು ಸೇರಿ 15 ಜನರಿಗೆ ಗಾಯವಾಗಿದ್ದು, ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.
ಗಂಭೀರ ಗಾಯಗೊಂಡವರನ್ನು ಚಾಮರಾಜನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದವರಿಗೆ ಗುಂಡ್ಲುಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು- ಕ್ರೂಸರ್ ನಡುವೆ ಅಪಘಾತ
ಕಲಬುರಗಿ ಜಿಲ್ಲೆಯ ಚಿತಾಪೂರ ತಾಲೂಕಿನ ಲಾಡ್ಲಾಪೂರ ಬಳಿ ಕಾರು ಹಾಗೂ ಕ್ರೂಸರ್ ಮಧ್ಯೆ ಡಿಕ್ಕಿಯಾಗಿ 10 ಮಂದಿ ಗಾಯಗೊಂಡಿದ್ದಾರೆ. ಕಲಬುರಗಿಯ ಖಾಜಾ ಬಂದೇನವಾಜ ದರ್ಗಾಕ್ಕೆ ವಿಜಯಪುರದಿಂದ 13 ಜನರು ಕ್ರೂಸರ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಕಾರು ಹಾಗೂ ಕ್ರೂಸರ್ ನಡುವೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಕ್ರೂಸರ್‌ನ ಟೈಯರ್ ಎಕ್ಸೆಲ್ ಮುರಿದು 2 ಪಲ್ಟಿ ಹೊಡೆದಿದೆ. ಗಾಯಾಳುಗಳಿಗೆ ಕಲಬುರಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ