ಬೆಂಗಳೂರು: ಇಲ್ಲಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Road Accident) ಲಾರಿ ಚಾಲಕನ ಎಡವಟ್ಟಿನಿಂದಾಗಿ ಸರಣಿ ಅಪಘಾತವೊಂದು ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕ್ಷಣಾರ್ಧದಲ್ಲಿ ನಡೆದ ಅಪಘಾತದಲ್ಲಿ ರಸ್ತೆ ಬದಿ ನಿಂತಿದ್ದ ನಾಲ್ಕು ದ್ವಿಚಕ್ರ ವಾಹನಗಳು, ಕಾರು, ಟಾಟಾ ಏಸ್ ವಾಹನಗಳೆಲ್ಲವೂ ಜಖಂಗೊಂಡಿವೆ.
ಶನಿವಾರ (ಏ.22) ಬೆಳಗ್ಗೆ 6 ಗಂಟೆಗೆ ಸುಮಾರಿಗೆ ಟೈಲ್ಸ್ ಲೋಡ್ ಆಗಿದ್ದ ಲಾರಿಯನ್ನು ಚಾಲಕ ನಿಲ್ಲಿಸಿದ್ದ, ಆದರೆ ಹ್ಯಾಂಡ್ ಬ್ರೇಕ್ ಹಾಕುವುದನ್ನು ಮರೆತು ಹೋಗಿದ್ದಾನೆ. ಈ ವೇಳೆ ಅಚಾನಕ್ ಆಗಿ ಲಾರಿ ಮುಂದೆ ಹೋಗಿದ್ದು, ಕ್ಷಣಾರ್ಧದಲ್ಲಿ ಸರಣಿ ಅಪಘಾತ ಸಂಭವಿಸಿದೆ. ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಎರಡು ಮೂರು ವಾಹನಗಳು ಜಖಂಗೊಂಡಿದೆ.
ಲೋಡ್ ಇಳಿಯುವ ಸಲುವಾಗಿ ಲಾರಿಯಲ್ಲಿ ಹತ್ತಿದ್ದ ಕೂಲಿ ಕಾರ್ಮಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಜಾನೆ ಹೊತ್ತು ಈ ಅವಘಡ ಸಂಭವಿಸಿದ್ದರಿಂದ ಹೆಚ್ಚಿನ ಜನರ ಓಡಾಟ ಇಲ್ಲದೆ ಇರುವುದರಿಂದ ಜೀವಹಾನಿ ಆಗಿಲ್ಲ. ಲಾರಿ ನೇರವಾಗಿ ನಿಂತಿದ್ದ ಕಾರು, ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದು ಅಲ್ಲಿಂದ ನೇರವಾಗಿ ಕಟ್ಟಡವೊಂದಕ್ಕೆ ಗುದ್ದಿ ಪಲ್ಟಿಯಾಗಿದೆ.
ಸರಣಿ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಇದನ್ನೂ ಓದಿ: Electricution : ನೀರಿನ ಪಂಪ್ ಸ್ವಿಚ್ ಹಾಕಲು ಹೋದಾಗ ವಿದ್ಯುತ್ ಶಾಕ್, ಯುವಕ ಮೃತ್ಯು
ಇತ್ತ ಲೋಡ್ ಆಗಿದ್ದ ಟೈಲ್ಸ್ ಎಲ್ಲವೂ ರಸ್ತೆಬದಿಗೆ ಬಿದ್ದು ಒಡೆದು ಹೋಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.