Site icon Vistara News

Road Accident : ಬ್ರೇಕ್‌ ಫೇಲ್‌; ಟೋಲ್‌ ಬಳಿ ನಿಂತಿದ್ದ ಪೊಲೀಸ್‌ ಜೀಪ್‌ಗೆ ಲಾರಿ ಡಿಕ್ಕಿ!

Police jeep Accident

ಕೋಲಾರ: ಅತಿ ವೇಗವಾಗಿ ಬಂದ ಲಾರಿಯೊಂದು ಟೋಲ್ ಬಳಿ ನಿಂತಿದ್ದ ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹನುಮನಹಳ್ಳಿ ಟೋಲ್ ಬಳಿ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.

ಪೊಲೀಸ್ ಜೀಪ್‌ನಲ್ಲಿ ಬೆಂಗಳೂರಿನ ಐಜಿ ಕಚೇರಿಯ ಡಿವೈಎಸ್‌ಪಿ ಗೋಪಾಲನಾಯ್ಕ್ ಅವರು ಮುಳಬಾಗಿಲು ನ್ಯಾಯಾಲಯಕ್ಕೆ ಹೋಗಿ ವಾಪಸ್‌ ಆಗುತ್ತಿದ್ದರು. ಈ ವೇಳೆ ಹನುಮನಹಳ್ಳಿ ಟೋಲ್‌ ಬಳಿ ವೇಗವಾಗಿ ಬಂದ ಲಾರಿಯೊಂದು ಪೊಲೀಸ್‌ ಜೀಪಿಗೆ ಡಿಕ್ಕಿ ಹೊಡೆದಿದೆ. 50 ಮೀಟರ್‌ ಎಳೆದುಹೋಗಿದೆ. ಲಾರಿ ಬ್ರೇಕ್ ಫೇಲ್‌ನಿಂದ ಈ ಅಪಘಾತ ಸಂಭವಿಸಿದೆ.

ಜೀಪ್‌ನಲ್ಲಿದ್ದ ಡಿವೈಎಸ್‌ಪಿ ಗೋಪಾಲನಾಯ್ಕ್‌ ಹಾಗೂ ಚಾಲಕನಿಗೆ ಸಣ್ಣ ಗಾಯಗಳಾಗಿದ್ದು, ಪ್ರಾಣಾಪಾರಾಗಿದ್ದಾರೆ. ಸ್ಥಳದಲ್ಲಿದ್ದ ಟೋಲ್‌ ಸಿಬ್ಬಂದಿ ಹಾಗೂ ಸವಾರರು ಕೂಡಲೇ ಜೀಪ್‌ನಲ್ಲಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಜೀಪ್‌ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಮುಳಬಾಗಿಲು ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Self Harming : ಸ್ನೇಹಿತನ ಹೆಂಡ್ತಿಯಿಂದ ಪೊರಕೆ ಏಟು; ಮನನೊಂದು ನೇಣಿಗೆ ಶರಣು!

ಟಿಪ್ಪರ್ ಲಾರಿ ಹರಿದು ಆಟೋ ಚಾಲಕ ಸಾವು; ತಲೆ, ದೇಹವೆಲ್ಲ ನಜ್ಜುಗುಜ್ಜು!

ಕೋಲಾರ : ಕೋಲಾರ ತಾಲೂಕಿನ ಮಡೇರಹಳ್ಳಿಯ ರಾ.ಹೆ 75ರ ಗೇಟ್ ಬಳಿ ಟಿಪ್ಪರ್ ಲಾರಿ (Lorry Accident) ಹರಿದು ಆಟೋ ಚಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಸೂಲೂರು ಗ್ರಾಮದ ನಿವಾಸಿ ಶಶಿಕುಮಾರ್‌ (29) ಮೃತ ದುರ್ದೈವಿ.

ವೇಗವಾಗಿ ಬಂದ ಟಿಪ್ಪರ್‌ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಬಳಿಕ ಲಾರಿ ಟಯರ್‌ ಚಾಲಕ ತಲೆ ಹಾಗೂ ದೇಹದ ಮೇಲೆ ಹತ್ತಿದ್ದರಿಂದ ಎಲ್ಲವೂ ಛಿದ್ರವಾಗಿದೆ. ಅಪಘಾತ ನಡೆಯುತ್ತಿದ್ದಂತೆ ಟಿಪ್ಪರ್ ಲಾರಿ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ.

ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಸ್ತೆಯಲ್ಲಿ ನಜ್ಜುಗುಜ್ಜಾಗಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದರು.

ತಿರುವಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ

ಕೊಡಗು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಸರ್ಕಾರಿ ಬಸ್‌ವೊಂದು (Bus Accident) ಡಿಕ್ಕಿಯಾದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ಎಂಬಲ್ಲಿ (Road Accident) ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್ ಮಡಿಕೇರಿಯಿಂದ ಸೂರ್ಲಬ್ಬಿ ಮಾರ್ಗವಾಗಿ ಸೋಮವಾರಪೇಟೆಗೆ ತೆರಳುತ್ತಿತ್ತು. ಕುಂಬಾರಗಡಿ ಸಮೀಪ ಬರುತ್ತಿದ್ದಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ. ಮರಕ್ಕೆ ಡಿಕ್ಕಿಯಾಗದೆ ಮುಂದೆ ಚಲಿಸಿದ್ದರೆ 50 ಅಡಿ ಪ್ರಪಾತಕ್ಕೆ ಉರುಳಿ ಬೀಳುವ ಆತಂಕ ಎದುರಾಗಿತ್ತು.

ಈ ಬಸ್ ನಲ್ಲಿ ಹೆಚ್ಚಾಗಿ ಶಾಲಾ ಮಕ್ಕಳೆ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಎಲ್ಲರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೂರ್ಲಬ್ಬಿ ಈ ಒಂದು ರಸ್ತೆ ಹೆಚ್ಚು ಕಿರಿದಾಗಿದ್ದು ಹೆಚ್ಚು ತಿರುವುಗಳೆ ಈ ರಸ್ತೆಯಲ್ಲಿದೆ. ತಿರುವುಗಳಲ್ಲಿ ಯಾವುದೇ ನಾಮಫಲಕಗಳು ಇಲ್ಲದಿರುವುದು ಹೊಸದಾಗಿ ಬರುವ ಚಾಲಕರಿಗೆ ರಸ್ತೆಯ ಅರಿವಿಲ್ಲದೆ ಈ ರೀತಿಯ ಅಪಘಾತಗಳು ಸಂಭವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Exit mobile version