ರಾಯಚೂರು/ತುಮಕೂರು: ರಾಜ್ಯದ ಮೂರು ಕಡೆ ಸಂಭವಿಸಿದ ಮೂರು ಭೀಕರ ಅಪಘಾತಗಳಲ್ಲಿ (Road accident) ಆರು ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಬೋರ್‌ವೆಲ್ ಕೆಲಸ ಮುಗಿಸಿ ನಿದ್ರೆಯಲ್ಲಿದ್ದ ಮೂವರು ಕಾರ್ಮಿಕರ ಮೇಲೆ ಜೆಸಿಬಿಯೊಂದು ಹರಿದು ಪ್ರಾಣವನ್ನೇ ಕಿತ್ತುಕೊಂಡಿದೆ.
ನಿದ್ರೆಯಲ್ಲೇ ಹೋಯಿತು ಪ್ರಾಣ
ನಿದ್ರೆಯಲ್ಲಿದ್ದ ಮೂವರ ಮೇಲೆ ಜೆಸಿಬಿ ಹರಿದು ಮೂವರು ಮಲಗಿದಲ್ಲೇ ಪ್ರಾಣ ಕಳೆದುಕೊಂಡ ಭಯಾನಕ ಘಟನೆಯೊಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಛತ್ತೀಸ್‌ಗಢ ಮೂಲದ ಮೂವರ ಕಾರ್ಮಿಕರಾದ ಕೃಷ್ಣಾ(25), ಶಿವುರಾಮ್(30), ಬಲರಾಮ(28) ಮೃತಪಟ್ಟ ದುರ್ದೈವಿಗಳು.
ಇವರು ಮಂಗಳವಾರ ರಾತ್ರಿ ಬೋರ್‌ವೆಲ್ ಕಾಮಗಾರಿ ಮುಗಿಸಿ ಜಮೀನಿನಲ್ಲೇ ಮಲಗಿದ್ದರು. ಈ ವೇಳೆ ಆ ದಾರಿಯಾಗಿ ಬಂದ ಜೆಸಿಬಿಯೊಂದು ಅವರ ಮೇಲೆ ಹರಿದಿದೆ.
ಬಾಲಯ್ಯ ಎಂಬುವರಿಗೆ ಸೇರಿದ್ದ ಜೆಸಿಬಿ ವಾಹನವನ್ನು ಅದರ ಚಾಲಕ ಜಮೀನಿನಲ್ಲಿ ಚಲಾಯಿಸಿಕೊಂಡು ಬಂದಿದ್ದ. ಆತನಿಗೂ ಈ ಕಾರ್ಮಿಕರು ರಸ್ತೆಯಲ್ಲೇ ಮಲಗಿದ್ದಾರೆ ಎಂಬ ವಿಚಾರ ತಿಳಿದಿರಲಿಲ್ಲ. ವಾಹನ ಅಲ್ಲಿ ಮಲಗಿದ್ದ ಮೂವರ ಮೇಲೆ ಹರಿದ ಮೇಲಷ್ಟೇ ಆತನಿಗೆ ತಾನು ಒಂದು ದೊಡ್ಡ ಅನಾಹುತ ಮಾಡಿದ್ದರ ಅರಿವಾಯಿತು.
ಆದರೆ ಅಷ್ಟು ಹೊತ್ತಿಗೆ ಮೂವರು ಒದ್ದಾಡಿ ಒದ್ದಾಡಿ ಪ್ರಾಣ ಕಳೆದುಕೊಂಡಿದ್ದರು. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.
ಮಧುಗಿರಿ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಒಬ್ಬ ಸಾವು
ತುಮಕೂರು: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಒಬ್ಬ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತೆರಿಯೂರು ಹೊರವಲಯ ಅಣ್ಣನಹಳ್ಳಿ ಗೇಟ್ ಬಳಿ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕಾರು ಚಾಲಕ ಭರತ್ ಕುಮಾರ್(24) ಮೃತ ದುರ್ದೈವಿ.
ಹಿಂದೂಪುರ ಕಡೆಯಿಂದ ಮುತ್ಯಾಲಮ್ಮನಹಳ್ಳಿಯ ಜಾತ್ರೆಗೆ ಬರುತ್ತಿದ್ದ ವೇಳೆ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರು ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ಹಂತದ ಮಾಹಿತಿಗಳು ತಿಳಿಸಿವೆ. ಗಾಯಾಳುಗಳನ್ನು ಮಧುಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಡಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.
ಘಟನೆ ನಡೆದು ಕೆಲವು ಗಂಟೆಗಳೇ ಕಳೆದರೂ ಆಂಬ್ಯುಲೆನ್ಸ್ ಸ್ಥಳಕ್ಕೆ ಬಾರದೆ ಭಾರಿ ತೊಂದರೆಯಾಯಿತು. ಊರಿನ ಜನರೆಲ್ಲ ನಡೆದುಕೊಂಡು ಸ್ಥಳಕ್ಕೆ ಬಂದರೂ ಪಕ್ಕದೂರಲ್ಲೇ ಇರುವ ಆಂಬ್ಯುಲೆನ್ಸ್ ಬಂದಿಲ್ಲ ಎಂದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಲಾರಿ ಮತ್ತು ಕಾರಿನ ನಡುವೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ತುಮಕೂರು: ಲಾರಿ ಹಾಗೂ ಎರ್ಟಿಗಾ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಗ್ರಹಾರದ ಬಳಿ ನಡೆದಿದೆ.
ತಡ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ನಡೆದ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಸ್ನೇಹಿತನ ಮದುವೆಗೆ ತೆರಳಿ ವಾಪಸ್ ಕೊರಟಗೆರೆ ಹಾಗೂ ಕೊಡಗೇನಹಳ್ಳಿ ವಾಪಸ್ ಬರುತಿದ್ದ ಯುವಕರ ತಂಡವೊಂದು ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಕಾರಿನಲ್ಲಿ ಒಟ್ಟು ಐವರು ಇದ್ದು, ಇಬ್ಬರು ಪ್ರಾಣ ಕಳೆದುಕೊಂಡರೆ, ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಮೂವರಿಗೆ ತಾಲೂಕು
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Road Accident: ನವ ವಿವಾಹಿತರನ್ನು ಮಣ್ಣುಗೂಡಿಸಿದ ಅಪಘಾತ