ಚಿತ್ರದುರ್ಗ/ ಹಾಸನ: ಚಿತ್ರದುರ್ಗ (chitradurga news) ಪಟ್ಟಣದ ತುರುವನೂರು ರಸ್ತೆಯಲ್ಲಿ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಸವಾರರಿಬ್ಬರು (Road Accident) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇರಜನಟ್ಟಿ ನಿವಾಸಿ ಆಗಿರುವ ನರಸಿಂಹಮೂರ್ತಿ (65) ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಚಿತ್ರದುರ್ಗ ಪಟ್ಟಣದ ವೈಶಾಲಿ ಏರಿಯಾ ನಿವಾಸಿ ಬಸವರಾಜ್ (60) ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇತ್ತ ಘಟನೆ ಬೆನ್ನಲ್ಲೇ ಸ್ಥಳದಲ್ಲೇ ಕಾರು ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಚಿತ್ರದುರ್ಗ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಪ್ರಾಣಕ್ಕೆ ಕುತ್ತು ತಂದ ವಿಂಡೋ ಸೀಟು
ಹಾಸನದ ಬೇಲೂರಿನ ನಿಡಗೋಡು ಗ್ರಾಮದ ಬಳಿ ಸಾರಿಗೆ ಬಸ್‌ವೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿ ಕಿಟಕಿ ಪಕ್ಕ ಕುಳಿತಿದ್ದ ಪ್ರಯಾಣಿಕನಿಗೆ ರಭಸವಾಗಿ ಮರವು ತಗುಲಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾವಿಗೀಡಾದ ವ್ಯಕ್ತಿ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹಾಸನದಿಂದ ಮಂಗಳೂರು ಕಡೆ ತೆರಳುತ್ತಿದ್ದ ಸಾರಿಗೆ ಬಸ್ ಇದಾಗಿದ್ದು, ಎದುರು ಬಂದ ಲಾರಿಗೆ ಜಾಗ ಬಿಡಲು ಎಡ ಬದಿಗೆ ಬಂದಾಗ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ: Rain News : ರಸ್ತೆಯಲ್ಲಿ ಬೋಟ್ ಸಂಚಾರ! ಮಳೆಗೆ ಮನೆಗಳು ನೆಲಸಮ
ರಸ್ತೆ ಪಕ್ಕದಲ್ಲೆ ಮರಗಳು ಇರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಸ್ಥಳೀಯರ ಆರೋಪಿಸಿದ್ದಾರೆ. ಈ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಮರ ತೆರವುಗೊಳಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ
ಚಿತ್ರದುರ್ಗ ತಾಲೂಕಿನ ಮದಕರಿಪುರದ ಬಳಿ ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಸ್ವಾಮಿ (28) ಮೃತಪಟ್ಟಿದ್ದಾರೆ. ಮದಕರಿಪುರದ ನಿವಾಸಿಯಾಗಿರುವ ಸ್ವಾಮಿ ಚಿತ್ರದುರ್ಗದ ಕಡೆ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಚಿತ್ರದುರ್ಗದ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ. ಇನ್ನು ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅಪಘಾತ ಸಂಭವಿಸಿದ್ದನ್ನು ಕಂಡು ಮಾಹಿತಿ ಪಡೆದಿದ್ದಾರೆ.
ಬಸ್- ಬುಲೆರೋ ವಾಹನ ಡಿಕ್ಕಿ
ದಾವಣಗೆರೆ ತಾಲೂಕಿನ ಕೊಡಗನೂರ ಕೆರೆ ಏರಿಯ ಬಳಿ ಖಾಸಗಿ ಬಸ್ ಹಾಗೂ ಬುಲೆರೋ ವಾಹನ ಡಿಕ್ಕಿಯಾಗಿದೆ. ಕೆರೆಗೆ ಉರುಳಬೇಕಿದ್ದ ಬಸ್ಸು ಚಾಲಕನ ಚಾಣಾಕ್ಷತನದಿಂದ ಪಕ್ಕಕ್ಕೆ ಸರಿದಿದೆ. ದಾವಣಗೆರೆಯಿಂದ ಹೊಸದುರ್ಗಕ್ಕೆ ಖಾಸಗಿ ಬಸ್ ಹೋಗುತ್ತಿದ್ದಾಗ ಕೆರೆ ಏರಿ ಬಳಿ ಬುಲೆರೋ ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬುಲೆರೋದಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಕೂಡಲೇ ಗಾಯಾಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸ್ಸಿನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟಗಾಯವಾಗಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ