Site icon Vistara News

Road Accident: ಹೆದ್ದಾರಿಯಲ್ಲಿ ನಿಂತಿದ್ದ ಟೆಂಪೋಗೆ ಬೈಕ್‌ ಡಿಕ್ಕಿ, ಇಬ್ಬರು ಸಾವು

tumkur sira accident

ತುಮಕೂರು: ಹೆದ್ದಾರಿ ಬದಿ ನಿಂತಿದ್ದ ಮಿನಿ ಟೆಂಪೊಗೆ ವೇಗವಾಗಿ ಬಂದ ಬೈಕ್ ಡಿಕ್ಕಿಯಾದ (Road Accident) ಪರಿಣಾಮ, ಬೈಕ್‌ ಸವಾರರಿಬ್ಬರು ಮೃತಪಟ್ಟಿದ್ದಾರೆ. ತುಮಕೂರು (tumkur news) ಜಿಲ್ಲೆಯ ಶಿರಾ ತಾಲೂಕಿನ ಮರಳಪ್ಪನಹಳ್ಳಿ ಬ್ರಿಡ್ಜ್ ಬಳಿ ದುರ್ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪಘಾತ ನಡೆದಿದ್ದು, ಸವಾರ ಪ್ರಭು ಗೌಡ (28) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕಿನಲ್ಲಿದ್ದ ಮತ್ತೊಬ್ಬ ಆನಂದ್ (30) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ. ಮೃತರು ಉತ್ತರ ಕರ್ನಾಟಕ ಮೂಲದವರು ಎನ್ನಲಾಗಿದೆ. ಮಿನಿ ಟೆಂಪೋ ಲಾರಿ ಹೆದ್ದಾರಿ ಬದಿ ಟಯರ್‌ ಪಂಚರ್ ಆಗಿ ನಿಂತಿದ್ದು, ಅದಕ್ಕೆ ಬೈಕ್ ಡಿಕ್ಕಿಯಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾರಿ ಗುದ್ದಿ ಸ್ಕಾರ್ಪಿಯೋ ಚಾಲಕ ಮೃತ್ಯು, ಆ್ಯಸಿಡ್ ಕುಡಿದು ಸಾವು

ವಿಜಯನಗರ: ವಿಜಯನಗರ (vijayanagara news) ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಒಬ್ಬರು ಆಕಸ್ಮಿಕವಾಗಿ ಆ್ಯಸಿಡ್ ಕುಡಿದು ಸಾವಿಗೀಡಾಗಿದ್ದರೆ, ಮತ್ತೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದೆ.

ಕೂಡ್ಲಿಗಿ ತಾಲೂಕಿನಲ್ಲಿ ಎರಡೂ ಪ್ರಕರಣಗಳು ನಡೆದಿವೆ. ಚಿತ್ರದುರ್ಗ ಕಡೆಯಿಂದ ವೇಗವಾಗಿ ಬಂದ ಲಾರಿ, ಸ್ಕಾರ್ಪಿಯೋ ಕಾರಿಗೆ ಗುದ್ದಿದ್ದರಿಂದ ಕಾರು ಚಾಲಕ ಸಂಡೂರು ತಾಲೂಕಿನ ಜಯಕುಮಾರ್ (58) ಎಂಬವರು ಸಾವಿಗೀಡಾಗಿದ್ದಾರೆ.

ಬುಲೆರೋ ಗೂಡ್ಸ್ ವಾಹನದಲ್ಲಿ ತರಕಾರಿ ಸಪ್ಲೈ ಮಾಡುತ್ತಿದ್ದ ರಂಗಸ್ವಾಮಿ (44) ಎಂಬವರು, ಬಾಯಾರಿಕೆ ತಣಿಸಿಕೊಳ್ಳಲೆಂದು ನೀರು ಎಂದು ಭಾವಿಸಿ ತನ್ನದೇ ವಾಹನದಲ್ಲಿದ್ದ ಆ್ಯಸಿಡ್ ಕುಡಿದ ಪರಿಣಾಮ ಸಾವಿಗೀಡಾಗಿದ್ದಾರೆ. ಕೂಡ್ಲಿಯಿಂದ ಕೊಟ್ಟೂರಿಗೆ ತರಕಾರಿ ಸಪ್ಲೈ ಮಾಡಲು ಹೋಗಿದ್ದ ಅವರು ಗೊತ್ತಾಗದೇ ಬಿಸಿಲಿನ ತಾಪಕ್ಕೆ ತಮ್ಮದೇ ವಾಹನದಲ್ಲಿದ್ದ ಆ್ಯಸಿಡ್ ಕುಡಿದಿದ್ದಾರೆ. ಬಳಿಕ ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರು ಎಳೆದಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಹೆಂಡತಿಯನ್ನು ಇರಿದು ಕೊಂದ ಗಂಡ

ಕೋಲಾರ: ಗಂಡನೇ ಹೆಂಡತಿಯನ್ನು ಚೂರಿಯಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಕೋಲಾರ (kolar news) ಜಿಲ್ಲೆಯ ಕೆಜಿಎಫ್‌ ಕೋರಮಂಡಲ್‌ನಲ್ಲಿ ನಡೆದಿದೆ. ಸಂಜಯಗಾಂಧಿನಗರ ನಿವಾಸಿ ಪವಿತ್ರ ಮೃತ ದುರ್ದೈವಿ.

ಇಂದು ಸಂಜೆ ಗಾರ್ಮೆಂಟ್ ಕೆಲಸ ಮುಗಿಸಿಕೊಂಡು ಬರುತ್ತಿರುವಾಗ ಘಟನೆ ನಡೆದಿದೆ. ಗಂಡ ಲೋಕೇಶ್‌ ಆಕೆಯನ್ನು ಚೂರಿಯಿಂದ ದೇಹದ ಹಲವು ಭಾಗಗಳಲ್ಲಿ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಸುನೀಗಿದ್ದಾಳೆ. ಇವರಿಗೆ ಒಂದು ಗಂಡು ಮತ್ತು ಹೆಣ್ಣು ಮಗುವಿದೆ.

ಮೃತ ಮಹಿಳೆ ಗಂಡನ ಮೇಲೆ ಈಚೆಗೆ ಊರಿಗಾಂ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕುರಿತು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಊರಿಗಾಂ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Car Accident: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಖ್ಯಾತ ಕ್ರೀಡಾಪಟುಗಳು ಇವರು

Exit mobile version