ಬೆಂಗಳೂರು: ಅತಿ ವೇಗ ಚಾಲನೆಯು ಚಾಲಕನೊಬ್ಬನ ಪ್ರಾಣವನ್ನೇ ಕಸಿದುಕೊಂಡಿದೆ. ಮಧ್ಯರಾತ್ರಿ ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು (Road Accident) ಬರುವಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಿರಣ್ (28) ಮೃತ ಚಾಲಕ.
ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ 1.20ಕ್ಕೆ ಈ ಅಪಘಾತ ನಡೆದಿದೆ. ಮಹರಾಜ ಪ್ಯಾಲೇಸ್ ಹೋಟೆಲ್ ಕಡೆಯಿಂದ ರೀತು ಆಸ್ಪತ್ರೆ ಕಡೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಅತಿ ವೇಗ ಮತ್ತು ನಿರ್ಲಕ್ಷ್ಯತೆಯಿಂದ ಬಂದು ಫುಟ್ ಪಾತ್ ಮೇಲಿರುವ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿ ರಸಭಕ್ಕೆ ಕಿರಣ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಲಘಟ್ಟಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತವಾದ ಕಾರನ್ನು ವಶಕ್ಕೆ ಪಡೆದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Fire Accident : ಬೆಂಕಿಗೆ ಸಿಲುಕಿ ಸುಟ್ಟು ಕರಕಲಾದ ಹಸುಗಳು! ನಿಂತಲ್ಲೇ ಹೊತ್ತಿ ಉರಿದ ಲಾರಿ
ಕಾರು-ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗೊಲ್ಲಹಳ್ಳಿ ಬಳಿ ಕಾರು ಮತ್ತು ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಮುಖಾಮುಖಿ ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳು ಜಖಂ ಗೊಂಡಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಶಿವಕುಮಾರ್( 32) ಮೃತ ದುರ್ದೈವಿ. ಅನಂತರಾಮ್( 37) ಗಾಯಾಳು. ಇವರಿಬ್ಬರು ಬೆಂಗಳೂರಿನ ಬಾಗಲುಗುಂಟೆ ನಿವಾಸಿಗಳಾಗಿದ್ದು, ಗಾಯಾಳು ಅನಂತ ರಾಮ್‌ಗೆ ಚಿಕಿತ್ಸೆ ಮುಂದುವರಿದಿದೆ. ಗೌರಿಬಿದನೂರು ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಹೋಗುವಾಗ ಅಪಘಾತ ನಡೆದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Leopard Death : ನಾಯಿಗಳ ದಾಳಿಯಿಂದ ಚಿರತೆ ಮರಿ ಸಾವು, ಇನ್ನೊಂದು ಕರೆಂಟ್ ಶಾಕ್‌ಗೆ ಬಲಿ
ಅಪಘಾತದಲ್ಲಿ ವ್ಯಕ್ತಿ ಸಾವು, ಕೊಲೆ ಶಂಕೆ
ಅಪಘಾತವೊಂದರಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಕಲಬುರಗಿ-ಶಹಾಪುರ ಹೆದ್ದಾರಿ ಬಳಿಯ ಮೂಡಬೂಳ ಬಳಿ ಘಟನೆ ನಡೆದಿದೆ. ಕಲಬುರಗಿ ಮೂಲದ ರಾಜು ಚವ್ಹಾಣ್ ಮೃತ ವ್ಯಕ್ತಿ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮೂಡಬೂಳ ಮುಖ್ಯ ಕಾಲುವೆ ಬಳಿ ಶವವಾಗಿ ಪತ್ತೆ ಆಗಿದೆ.
ಮೃತ ರಾಜು ಚವ್ಹಾಣ್ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. ಹತ್ಯೆ ಮಾಡಿ ಶವ ಬೀಸಾಕಿದ್ದಾರೆ ಎಂದು ರಾಜು ಚವ್ಹಾಣ್ ಪತ್ನಿಯಿಂದ ದೂರು ನೀಡಿದ್ದಾರೆ. ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.