Site icon Vistara News

Road Accident : ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ದುರ್ಮರಣ; ಪ್ರಪಾತಕ್ಕೆ ಉರುಳಿದ ಕಾರು, ಬಸ್‌

Road Accident

ಕೋಲಾರ/ಚಿಕ್ಕಮಗಳೂರು/ ಹುಬ್ಬಳ್ಳಿ: ವಿವಿಧ ಭಾಗಗಳಲ್ಲಿ ರಸ್ತೆ ಅಪಘಾತ (Road Accident) ಸಂಭವಿಸಿದೆ. ಕೋಲಾರದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದಾರೆ. ಇತ್ತ ಚಿಕ್ಕಮಗಳೂರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪ್ರಪಾತಕ್ಕೆ ಉರುಳಿ ಬಿದ್ದಿದೆ. ಹುಬ್ಬಳ್ಳಿಯಲ್ಲೂ ಕಾರುವೊಂದು ಮನೆಯೊಳಗೆ ನುಗ್ಗಿದೆ. ಅಥಣಿಯಲ್ಲಿ ಬಸ್‌ನ ಸ್ಟೇರಿಂಗ್‌ ಕಟ್‌ ಆಗಿ ಅಪಘಾತಕ್ಕೀಡಾಗಿದೆ.

ಅಪರಿಚಿತ ವಾಹನ ಡಿಕ್ಕಿ, ಸವಾರ ಸಾವು

ಕೋಲಾರದ ಮುಳಬಾಗಿಲು ತಾಲೂಕಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಗಾರೆ ಮೇಸ್ತ್ರಿಯಾಗಿರುವ ವೆಂಕಟರಾಯಪ್ಪ (50) ಮೃತ ದುರ್ದೈವಿ.

ವಡ್ಡಳ್ಳಿ – ಪುಂಗನೂರು ಮಾರ್ಗದ ಬೇವಳ್ಳಿ ಬಳಿ ಘಟನೆ ನಡೆದಿದೆ. ರಸ್ತೆಯಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident: 13 ಮಂದಿಯ ಬಲಿ ಪಡೆದ ದಟ್ಟ ಮಂಜು; ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ

ಉರುಳಿ ಬಿದ್ದ ಕಾರು, ಚಾಲಕ ಸಾವು

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಜನ್ನಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ 300 ಅಡಿ ಆಳಕ್ಕೆ ಕಾರು ಬಿದ್ದಿದೆ. ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಂಜನ್ (38) ಮೃತ ಕಾರು ಚಾಲಕನಾಗಿದ್ದಾನೆ.

ತಡೆಗೋಡೆ ಇಲ್ಲದ ಕಾರಣಕ್ಕೆ ಕಾರು ಏಕಾಏಕಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಜನ್ನಾಪುರದಿಂದ ಕಳಸ ಕಡೆಗೆ ಹೋಗುವಾಗ ಈ ಅವಘಡ ಸಂಭವಿಸಿದೆ. ತಿರುವಿನಲ್ಲಿ ತಡೆಗೋಡೆ ನಿರ್ಮಿಸಲು ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಸ್ಥಳಕ್ಕೆ ಬಾಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮೇಲೆತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಬಾಳೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕುಡಿದು ಕಾರು ಚಲಾಯಿಸಿದ ಚಾಲಕ

ಚಾಲಕನ ನಿಯಂತ್ರಣ‌ ತಪ್ಪಿ ಕಾರು ಮನೆಯೊಳಗೆ ನುಗ್ಗಿದ ಘಟನೆ ಹುಬ್ಬಳ್ಳಿಯ ಕೃಷ್ಣಾಪುರ ಬಡಾವಣೆಯಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಕಾರಲ್ಲಿದ್ದ ನಾಲ್ವರು ಪಾರಾಗಿದ್ದಾರೆ.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್ ಎನ್ನುವಂತಿದೆ. ಘಟನೆಯಲ್ಲಿ ಎರಡು ಕಾರು, ಎರಡು ದ್ವಿಚಕ್ರ‌ ವಾಹನಗಳು ಜಖಂಗೊಂಡಿದೆ. ಕುಡಿದ ಮತ್ತಿನಲ್ಲಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡ ಬಂದ ಚಾಲಕ, ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮನೆಯೊಳಗೆ ನುಗ್ಗಿದೆ. ಕಾರು ಚಾಲಕ ವಾಸಿಮ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ದಕ್ಷಿಣ ಸಂಚಾರ ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಳ್ಳಕ್ಕೆ ನುಗ್ಗಿದ ಸರ್ಕಾರಿ ಬಸ್‌

ಬೆಳಗಾವಿ ಜಿಲ್ಲೆಯ ಅಥಣಿ- ಸಾವಳಗಿ ರಸ್ತೆಯಲ್ಲಿ ಅನಾಹುತವೊಂದು ತಪ್ಪಿದೆ. ಸರ್ಕಾರಿ ಬಸ್ ಸ್ಟೇರಿಂಗ್‌ ಕಟ್ಟಾಗಿ ಹಳ್ಳಕ್ಕೆ ನುಗ್ಗಿದೆ. ಅಥಣಿ ಬಬಲೇಶ್ವರ ಮಾರ್ಗವಾಗಿ ಸಂಚರಿಸುವ ಬಸ್ ಇದಾಗಿದ್ದು, ಇಳಿಜಾರು ಪ್ರದೇಶದಲ್ಲಿ ಅವಘಡ ಸಂಭವಿಸಿದೆ.

ಬಸ್‌ನಲ್ಲಿ ಸುಮಾರು 65ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ಕಟಗೇರಿ ಸಮೀಪದ ಸೈನಿಕೇತನ್ ಶಾಲೆ ಸಮೀಪ ಸ್ಟೇರಿಂಗ್‌ ಕಟ್‌ ಆಗಿದೆ. ಇಳಿಜಾರು ಪ್ರದೇಶವಾಗಿದ್ದರಿಂದ ಹಳ್ಳಕ್ಕೆ ನುಗ್ಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version